ಕೋವಿಡ್-19 ಕ್ರಿಯಾಪಡೆ ನೇತೃತ್ವವನ್ನು ಮೋದಿ ವಹಿಸಬೇಕೆಂದು 18 ದೇಶಗಳು ಬಯಸಿವೆಯೇ?

Update: 2020-04-03 12:18 GMT

ಹೊಸದಿಲ್ಲಿ : ಕೊರೋನ ವೈರಸ್ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಕ್ರಿಯಾ ಪಡೆಯೊಂದರ ನೇತೃತ್ವವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ವಹಿಸಬೇಕೆಂದು ಅಮೆರಿಕಾ, ಇಂಗ್ಲೆಂಡ್ ಸಹಿತ 18 ದೇಶಗಳು ಬಯಸುತ್ತಿವೆ ಎಂದು ' WION TV' ಎಂಬ ಚಾನೆಲ್ ನಲ್ಲಿ ಪ್ರಸಾರವಾದ ಸುದ್ದಿಯೊಂದನ್ನು ಆಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹಗಳು ಹರಡುತ್ತಿವೆ.

ಇದೇ ವಿಚಾರ ಕುರಿತಂತೆ ಮಹಾರಾಷ್ಟ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅತುಲ್ ಭಟ್ಖಳ್ಕರ್ ಟ್ವೀಟ್ ಮಾಡಿದ್ದಾರಲ್ಲದೆ,
"ಇದು ಭಾರತಕ್ಕೊಂದು ಹೆಮ್ಮೆಯ ಕ್ಷಣ, ನಾವು ನಮ್ಮ ಮಹಾನ್ ನಾಯಕನನ್ನು ಬೆಂಬಲಿಸೋಣ, ಕೊರೋನ ವಿರುದ್ಧದ ಯುದ್ಧವನ್ನು ನಾವು ಖಂಡಿತಾ ಗೆಲ್ಲುತ್ತೇವೆ'' ಎಂದಿದ್ದಾರೆ.

ಮಣಿಪುರ ಮುಖ್ಯಮಂತ್ರಿಯ ಸಲಹೆಗಾರ ರಜತ್ ಸೇಠಿ ಇನ್ನೊಂದು ಹೆಜ್ಜೆ ಮುಂದೆ  ಹೋಗಿ ``ವಿಶ್ವ ನಾಯಕರಾದ ಟ್ರಂಪ್, ಬೋರಿಸ್ ಜಾನ್ಸನ್, ಸ್ಕಾಟ್ ಮಾರ್ರಿಸನ್ ಮತ್ತಿತರರು ನಮ್ಮ ಪ್ರಧಾನಿ ಮೋದಿ ನೇತೃತ್ವ ವಹಿಸಬೇಕೆಂದು ಬಯಸುತ್ತಿದ್ದಾರೆ,''  ಎಂದು ಟ್ವೀಟ್ ಮಾಡಿದ್ದಾರೆ.

ವಿಯೋನ್ ಸುದ್ದಿ ತುಣುಕು ಈಗ ಫೇಸ್ ಬುಕ್ ಹಾಗೂ ಟ್ವಿಟ್ಟರ್‍ನಲ್ಲಿ ವೈರಲ್ ಆಗಿದೆ.

ಅಸಲಿಯತ್ತೇನು ?

ವಾಸ್ತವವಾಗಿ ವಿಯೋನ್ ವಾಹಿನಿಯ ಈ ನಿರ್ದಿಷ್ಟ ವೀಡಿಯೋ ಕ್ಲಿಪ್ ಮಾರ್ಚ್ 15, 2020ರಂದು ಪ್ರಸಾರವಾಗಿತ್ತು. "ವಿಶ್ವ ನಾಯಕರು ಪ್ರಧಾನಿ ಮೋದಿಯ ಕ್ರಮ ಶ್ಲಾಘಿಸಿದ್ದಾರೆ'' ಎಂಬ ಶೀರ್ಷಿಕೆಯ ಈ ಸುದ್ದಿ ತುಣುಕಿನಲ್ಲಿ ಕ್ರಿಯಾಪಡೆಯ ನೇತೃತ್ವವನ್ನು ಮೋದಿ ವಹಿಸಬೇಕೆಂದು ಅಮೆರಿಕಾ, ಇಂಗ್ಲೆಂಡ್ ಹಾಗೂ 18 ಇತರ ದೇಶಗಳು ಆರಿಸಿದೆ ಎಂದು  ಹೇಳಿಲ್ಲ,. ಬದಲಾಗಿ ಪ್ರಧಾನಿ ಮೋದಿ ಈ ಸಾಂಕ್ರಾಮಿಕ ರೋಗ ತಡೆಗಟ್ಟಲು ದೇಶಗಳ ನಡುವೆ ಜಂಟಿ ಕ್ರಿಯಾ ಯೋಜನೆಯಿರಬೇಕೆಂದು ಹೇಳಿರುವುದರಿಂದ  ಭಾರತವು ಕ್ರಿಯಾಪಡೆಯ ಉಸ್ತುವಾರಿ ವಹಿಸಲು 'ನಾಯಕ'ನಾಗಿ ಹೊರಹೊಮ್ಮಿದೆ ಎಂದು ಹೇಳಿದ್ದರು.

"ಎಲ್ಲಾ ಸಾರ್ಕ್ ದೇಶಗಳು ಭಾರತದ ಕ್ರಮವನ್ನು ಶ್ಲಾಘಿಸಿವೆ, ಜಗತ್ತಿನ ಇತರ ದೇಶಗಳ ನಾಯಕರೂ ಪ್ರಧಾನಿಯನ್ನು  ಶ್ಲಾಘಿಸಿದ್ದಾರೆ. ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಸಂಘಟಿತ ಯತ್ನದ ಕುರಿತು ಮೋದಿ ಜತೆ ಚರ್ಚಿಸಿದ್ದರೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರ್ರಿಸನ್ ಕೂಡ ಜಿ20 ರಾಷ್ಟ್ರಗಳೂ ಒಗ್ಗೂಡಬೇಕೆಂದು ಮೋದಿ ಹೇಳಿರುವುದನ್ನು ಬೆಂಬಲಿಸಿದ್ದಾರೆ'' ಎಂದು ನಿರೂಪಕಿ ಹೇಳಿದ್ದರು. ಆದರೆ ಎಲ್ಲಿಯೂ ಮೋದಿ ಕ್ರಿಯಾಪಡೆಯ ಅಧ್ಯಕ್ಷತೆ ವಹಿಸುತ್ತಾರೆಂಬ ಬಗ್ಗೆ ಉಲ್ಲೇಖವಿಲ್ಲ ಎಂಬುದು ವಾಸ್ತವ.

ವಿಯೋನ್ ವಾಹಿನಿ ಝೀ ಮೀಡಿಯಾ ಒಡೆತನದ್ದಾಗಿದ್ದು ಝೀ ನ್ಯೂಸ್ ಸಂಪಾದಕ ಸುಧೀರ್ ಚೌಧುರಿ ಅವರೇ ವಿಯೋನ್ ವಾಹಿನಿಯ ಮುಖ್ಯ ಸಂಪಾದಕರಾಗಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News