ಉಡುಪಿಯಲ್ಲಿ ಬಡವರಿಗೆ ಬಿರಿಯಾನಿ ವಿತರಣೆ

Update: 2020-04-03 13:38 GMT

ಉಡುಪಿ, ಎ.3: ನೋವೆಲ್ ಕೊರೋನ ವೈರಸ್ ವ್ಯಾಪಕವಾಗಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ವಲಸೆ ಕಾರ್ಮಿಕರು, ನಿರಾಶ್ರಿತರು, ಬಡವರು ಸಂಕಷ್ಟಕ್ಕೆ ಸಿಲುಕಿದ್ದು, ಇವರಿಗಾಗಿ ಜಿಲ್ಲೆಯ ನಾನಾ ಕಡೆಗಳಲ್ಲಿ ಸಹೃದಯಿಗಳು ಊಟ-ತಿಂಡಿಯೊಂದಿಗೆ ಜೀವನಾವಶ್ಯಕ ವಸ್ತುಗಳನ್ನು ವಿತರಿಸಿ ಅವರ ಬದುಕಿಗೆ ಆಸರೆಯಾಗುತಿದ್ದಾರೆ.

ಇಂಥ ದಾನಿಗಳು ಬೆಳಗಿನ ಉಪಹಾರ, ಅಪರಾಹ್ನ ಮತ್ತು ರಾತ್ರಿಯ ಊಟವನ್ನು ಅವರಿರುವ ಶಿಬಿರಗಳಲ್ಲಿ ವಿತರಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ದುಡಿಮೆ ಅಸಾಧ್ಯವಾದ ಹಿನ್ನೆಲೆಯಲ್ಲಿ ಅವರ ಹೊಟ್ಟೆ ತಣಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಉಡುಪಿಯಲ್ಲೂ ಹಲವೆಡೆ ಈಗ ನಿರಂತರವಾಗಿ ಅನ್ನದಾನ ಕಾರ್ಯ ನಡೆಯುತ್ತಿದೆ. ಇಂದು ಶುಕ್ರವಾರ ಬಡವರಿಗೆ ಮತ್ತು ಅಶಕ್ತರಿಗೆ ಬಿರಿಯಾನಿ ವಿತರಿಸಿದ್ದು ವಿಶೇಷವಾಗಿತ್ತು.

ನಗರದ ಸಿಟಿಬಸ್ ನಿಲ್ದಾಣ ಸಮೀಪ ನಿತ್ಯ ದಾನಿಗಳ ಸಹಾಯದಿಂದ ಮಧ್ಯಾಹ್ನ ಮತ್ತು ರಾತ್ರಿ ವೆಜ್ ಪುಲಾವ್ ಮತ್ತು ಮೊಟ್ಟೆ ವಿತರಿಸಲಾಗುತ್ತಿದೆ. ಆದರೆ ಇಂದು ಚಿಕನ್ ಬಿರಿಯಾನಿ ಮಾಡಿ ಬಡವರಿಗೆ ಹಂಚಲಾಯಿತು. ಸುಮಾರು 600ಕ್ಕೂ ಅಧಿಕ ಮಂದಿ ನಿರಾಶ್ರಿತರು ಹಾಗು ಬಡವರಿಗೆ ಬಿರಿಯಾನಿ ಊಟದ ಪೊಟ್ಟಣವನ್ನು ಸ್ವೀಕರಿಸಿದರು. ಸಮಾಜಸೇವಕರು ಸಾಮಾಜಿಕ ಅಂತರ ಕಾಯ್ದುಕೊಂಡೇ ಬಂದವರಿಗೆ ಬಿರಿಯಾನಿ ಪೊಟ್ಟಣ ನೀಡಿ ಕಳಿಸಿದರು.

ಈ ನಡುವೆ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿಯಾದ ಜಯರಾಮ ರಾವ್ ತಮ್ಮ 63ನೇ ಹುಟ್ಟುಹಬ್ಬವನ್ನು ನಿರಾಶ್ರಿತರು, ಕೂಲಿ ಕಾರ್ಮಿಕರ ಜೊತೆ ಆಚರಿಸಿದರು. ಸುಮಾರು 2000 ಜನರಿಗೆ ಅವರು ಊಟೋಪಚಾರದ ವ್ಯವಸ್ಥೆ ಮಾಡಿದ್ದರು. ಉಡುಪಿ ನಗರದ ಸುಮಾರು 10 ಕಡೆಗಳಲ್ಲಿ ಅವರು ಅಪರಾಹ್ನದ ಅನ್ನದಾನ ಮಾಡಿ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಜಯರಾಮ್ ಅವರ ಪತ್ನಿ ವೀಣಾ ರಾವ್ ಜೊತೆಗಿದ್ದು ಊಟ ವಿತರಣೆ ಮಾಡಿದರು. ಕಡಿಯಾಳಿ ಗಣೇಶೋತ್ಸವ ಸಮಿತಿ ಮೂಲಕ ಅನ್ನದಾನ ಮಾಡಿದ್ದು, ವ್ಯವಸ್ಥಾಪಕ ಮಂಜುನಾಥ್ ಹೆಬ್ಬಾರ್, ಶಾಸಕ ರಘುಪತಿ ಭಟ್, ಮೇಲ್ವಿಚಾರಕ ರಾಘವೇಂದ್ರ ಕಿಣಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News