ಲಾಕ್‌ಡೌನ್ ಅವಧಿಯಲ್ಲೂ ಎಂಆರ್‌ಪಿಎಲ್‌ನಿಂದ ತೈಲ ಸಂಸ್ಕರಣೆ

Update: 2020-04-03 13:40 GMT

ಮಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಒತ್ತಡದ ನಡುವೆಯೂ ಎಂಆರ್‌ಪಿಎಲ್ ತೈಲ ಸಂಸ್ಕರಣೆ ಕಾರ್ಯ ನಡೆಸುತ್ತಿದ್ದು, ರಾಜ್ಯ ಮತ್ತು ದಕ್ಷಿಣ ಭಾರತಕ್ಕೆ ಅಡುಗೆ ಅನಿಲ, ಡೀಸೆಲ್, ಪೆಟ್ರೋಲ್ ಪೂರೈಸುತ್ತಿದೆ ಎಂದು ಒಎನ್‌ಜಿಸಿ- ಎಂಆರ್‌ಪಿಎಲ್ ಕಾರ್ಪೋರೇಟ್ ಕಮ್ಯೂನಿಕೇಶನ್ ಪ್ರಧಾನ ವ್ಯವಸ್ಥಾಪಕ ರುಡಾಲ್ಫ್ ವಿ.ಜೆ. ನೊರೋನ್ಹಾ ತಿಳಿಸಿದ್ದಾರೆ.

ಪ್ರಸಕ್ತ ಸನ್ನಿವೇಶದಲ್ಲಿ ಇಂಧನ ಪೂರೈಕೆ ಅತ್ಯವಶ್ಯವಾಗಿದೆ. ಕೊರೀನ ವೈರಸ್‌ನಿಂದಾಗಿ ಅತಿ ಹೆಚ್ಚು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕಾದ ಒತ್ತಡದೊಂದಿಗೆ ಅಗತ್ಯ ಸಾಮಗ್ರಿಗಳ ಪೂರೈಕೆಯನ್ನು ನಿರಂತರವಾಗಿ ಕಾಯ್ದುಕೊಳ್ಳಬೇಕಾದ ಜವಾಬ್ದಾರಿ ಕೇಂದ್ರ ಸರಕಾರ ಸ್ವಾಮ್ಯದ ಎಂಆರ್‌ಪಿಎಲ್ ಸಂಸ್ಥೆ ಮೇಲಿದೆ ಎಂದರು.

ಲಾಕ್‌ಡೌನ್ ಅವಧಿಯಲ್ಲಿ ತೈಲ ಪೂರೈಕೆ ಮಾಡುವ ವಿವಿಧ ಸರಕಾರಿ ಸಂಸ್ಥೆಗಳು, ಸ್ಥಳೀಯ ಡಿಪೋಗಳು, ಪೈಪ್‌ಲೈನ್ ಮೂಲಕ ಹಾಸನ ಹಾಗೂ ಬೆಂಗಳೂರು, ಬಳಿಕ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಾಗಿದೆ.

ಲಾಕ್‌ಡೌನ್ ಆರಂಭವಾದ ಬಳಿಕ ಒಂದು ದಶಲಕ್ಷ ಸಿಲಿಂಡರ್‌ಗಳಿಗೆ ಆಗುವಷ್ಟು ಅಡುಗೆ ಅನಿಲವನ್ನು ಸಂಸ್ಥೆ ಪೂರೈಸಿ ರಾಜ್ಯ ಅಡುಗೆ ಮನೆಗೆ ತಲುಪಿಸಲು ಕಾರಣವಾಗಿದೆ. ೩೦ ದಶಲಕ್ಷ ಲೀಟರ್‌ನಷ್ಟು ಡೀಸೆಲ್ ಪೂರೈಸಿ ತರಕಾರಿ, ಆಹಾರ ಸಾಮಗ್ರಿ, ಔಷಧ ಹಾಗೂ ಅಗತ್ಯ ಸೇವೆಗಳು ಜನರಿಗೆ ಸಮರ್ಪಕವಾಗಿ ತಲುಪಲು ಕಾರಣವಾಗಿದೆ. ಎಂಆರ್‌ಪಿಎಲ್ ಸಂಸ್ಥೆ ಮತ್ತು ಸಿಬ್ಬಂದಿ ವರ್ಗ ಈ ಕೆಲಸ ನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

10,000 ಸ್ಯಾನಿಟೈಝರ್ ವಿತರಣೆ
ಕೊರೋನ ಸೋಂಕು ಹಾವಳಿಯ ಪರಿಸ್ಥಿತಿ ನಿಭಾಯಿಸಲು ಎಂಆರ್‌ಪಿಎಲ್ ವತಿಯಿಂದ ಜಿಲ್ಲಾಡಳಿತಕ್ಕೆ 10,000 ಸ್ಯಾನಿಟೈಝರ್‌ಗಳನ್ನು ಹಸ್ತಾಂತರಿಸಲಾಗಿದೆ.

ಜಿಲ್ಲಾಡಳಿತದ ಸ್ವಾಮ್ಯಕ್ಕೆ ಒಳಪಟ್ಟ ಕಚೇರಿ, ಆಸ್ಪತ್ರೆ, ವೈದ್ಯಕೀಯ ವೃಂದದ ಸುರಕ್ಷತೆಗಾಗಿ ಎಂಆರ್‌ಪಿಎಲ್ ಈ ಕೊಡುಗೆ ನೀಡಿದೆ ಎಂದು ರುಡಾಲ್ಫ್ ವಿ.ಜೆ. ನೊರೋನ್ಹಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News