ಜನಪ್ರತಿನಿಧಿಗಳಿಂದ ದಿನಕ್ಕೊಂದು ಹೇಳಿಕೆ: ಯಾವ ಆದೇಶ ಪಾಲಿಸಬೇಕೆಂಬ ಗೊಂದಲದಲ್ಲಿ ದ.ಕ. ಜಿಲ್ಲೆಯ ಜನತೆ

Update: 2020-04-03 14:27 GMT

ಮಂಗಳೂರು, ಎ.3: ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದ.ಕ.ಜಿಲ್ಲಾಧಿಕಾರಿ, ಮಂಗಳೂರು ನಗರ ಪೊಲೀಸ್ ಆಯುಕ್ತ, ಜಿಲ್ಲಾ ಎಸ್ಪಿ, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಮಾ.22ರ ಜನತಾ ಕರ್ಫ್ಯೂ ಬಳಿಕ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದು, ಜನಸಾಮಾನ್ಯರು ಮತ್ತು ಸರಕಾರದ ವಿವಿಧ ಇಲಾಖೆಯ ಅಧೀನ ಅಧಿಕಾರಿಗಳು -ಸಿಬ್ಬಂದಿ ವರ್ಗವು ಯಾರ, ಯಾವ ಆದೇಶಗಳನ್ನು ಪಾಲಿಸಬೇಕು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

ತನ್ನ ಆದೇಶ, ಹೇಳಿಕೆಯಿಂದ ಜನಸಾಮಾನ್ಯರಿಗೆ ಆಗುವ ಸಾಧಕ ಬಾಧಕಗಳ ಬಗ್ಗೆಯೂ ಈ ಅಧಿಕಾರಿ ಮತ್ತು ಜನಪ್ರತಿನಿಧಿಗಳಿಗೆ ಅರಿವಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಬಹುತೇಕ ಎಲ್ಲರೂ ನಗರ ಕೇಂದ್ರೀಕೃತವಾಗಿ ಆದೇಶ ನೀಡುತ್ತಿದ್ದು, ಅದನ್ನು ಗ್ರಾಮೀಣ ಪ್ರದೇಶದ ಸಿಬ್ಬಂದಿ ವರ್ಗವು ಸಮಸ್ಯೆಯನ್ನು ಎದುರಿಸುತ್ತಿದೆ.

ಎ.2ರ ಮಧ್ಯಾಹ್ನ 12:30ರ ಬಳಿಕ ಯಾವುದೇ ಖಾಸಗಿ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ ಎಂದು ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಎಸ್ಪಿ ದಿಢೀರ್ ಆಗಿ ಘೋಷಿಸಿದರು. ಈ ಸೂಚನೆ ಬಹುತೇಕ ಜನರಿಗೆ ತಲುಪುವಾಗ ತಡವಾಗಿದೆ. ಇದರಿಂದ ಜಿಲ್ಲೆಯ 250ಕ್ಕೂ ಅಧಿಕ ಮಂದಿಯ ವಾಹನಗಳು ಪೊಲೀಸರ ವಶವಾಗಿದೆ. ಒಂದು ದಿನ ಮೊದಲೇ ಈ ಬಗ್ಗೆ ಸೂಚನೆ ನೀಡಿದ್ದರೆ ಈ ವಾಹನಿಗರ ಪೈಕಿ ಕೆಲವು ಮಂದಿಯಾದರೂ ಎಚ್ಚರಿಕೆ ವಹಿಸಿಕೊಳ್ಳುತ್ತಿದ್ದರು ಎಂಬ ಅಭಿಪ್ರಾಯವ್ಯಕ್ತವಾಗಿದೆ.

ಬೆಳಗ್ಗೆ 7ರಿಂದ12 ಗಂಟೆ ತನಕ ಅಂಗಡಿಗಳನ್ನು ತೆರೆದಿಡಲು ಅದೇಶಿಸಿದ್ದರೂ ಕೂಡ ಪೊಲೀಸರು 11ಗಂಟೆಯಾಗುವಾಗಲೇ ಅಂಗಡಿಗಳನ್ನು ಮುಚ್ಚಲು ಸೂಚನೆ ನೀಡುತ್ತಿದ್ದಾರೆ. ಇದರಿಂದ ಅಂಗಡಿ ಮಾಲಕರು ಮತ್ತು ಗ್ರಾಹಕರು ಪೊಲೀಸರಿಗೆ ಹೆದರುವಂತಾಗಿದೆ. ಅಂದರೆ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಮತ್ತು ಗ್ರಾಹಕರಿಗೆ ಖರೀದಿಸಲೂ ಆಗದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಖರೀದಿಸಿದ ಸಾಮಗ್ರಿಗಳನ್ನು ರಿಕ್ಷಾದಲ್ಲಿ ಮನೆಗೆ ಸಾಗಿಸಲು ಕೂಡ ಪೊಲೀಸರು ಅವಕಾಶ ನೀಡದಿರುವ ಬಗ್ಗೆಯೂ ಆಕ್ರೋಶ ವ್ಯಕ್ತವಾಗುತ್ತಿದೆ.

ಪೊಲೀಸ್ ಇಲಾಖೆಯು ಮನೆ ಸಮೀಪದ ಅಂಗಡಿಯಿಂದಲೇ ಸಾಮಗ್ರಿಗಳನ್ನು ಖರೀದಿಸಿ ಎಂದು ಸೂಚನೆ ನೀಡಿರುವುದ ಬಗ್ಗೆ ಮಾನವ ಹಕ್ಕುಗಳ ಹೋರಾಟಗಾರ ಕಬೀರ್ ಉಳ್ಳಾಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಲ್ಲರ ಮನೆಯ ಬಾಗಿಲಲ್ಲಿ ಅಂಗಡಿಗಳು ಇರುವುದಿಲ್ಲ. ಇದ್ದರೂ ಅಲ್ಲಿ ಎಲ್ಲಾ ಸಾಮಾನುಗಳು ಕೂಡ ದೊರೆಯುದಿಲ್ಲ ಎಂಬ ಪ್ರಜ್ಞೆ ಅಧಿಕಾರಿಗಳಲ್ಲಿ ಇಲ್ಲದಿರುವುದು ವಿಪರ್ಯಾಸ. ಇನ್ನು ಸಾಮಗ್ರಿ ಖರೀದಿಸಿ ದ್ವಿಚಕ್ರ ವಾಹನದಲ್ಲೂ ಸಾಗಿಸಲು ಪೊಲೀಸರು ತಡೆಯೊಡ್ಡುತ್ತಿರುವ ಬಗ್ಗೆಯೂ ದೂರುಗಳಿವೆ. ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಅಧಿಕಾರಿ ವರ್ಗ, ಜನಪ್ರತಿನಿಧಿಗಳು ರೂಪಿಸುವ ನಿಯಮಗಳು ಜನರಿಗೆ ಪೂರಕವಾಗಿರಬೇಕೇ ವಿನಃ ಮಾರಕವಾಗಿರಬಾರದು ಎಂದು ಹೇಳಿದ್ದಾರೆ.

ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಒಂದೊಂದು ಹೇಳಿಕೆ ನೀಡುತ್ತಿರುವುದರಿಂದ ಜಿಲ್ಲೆಯ ಜನತೆ ಮಾತ್ರವಲ್ಲ, ಅಧೀನ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಕೂಡ ಗೊಂದಲಕ್ಕೀಡಾಗಿದ್ದಾರೆ.

ಪತ್ರಕರ್ತರಿಗೂ ಕಿರಿಕಿರಿ: ಜಿಲ್ಲಾ ವಾರ್ತಾ ಇಲಾಖೆಯ ಅಧಿಕೃತ ಪಾಸ್ ಪಡೆದು ಕರ್ತವ್ಯ ನಿರ್ವಹಿಸುವ ನಗರದ ಪತ್ರಕರ್ತರು ಕೂಡ ಕೆಲವು ಪೊಲೀಸ್ ಅಧಿಕಾರಿಗಳ ಕಿರಿಕಿರಿ ಎದುರಿಸಬೇಕಿದೆ. ಗುರುವಾರ ಹೇಳಿಕೆಯೊಂದನ್ನು ನೀಡಿದ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ‘ಪತ್ರಕರ್ತರು ಅಧಿಕೃತ ಪಾಸ್ ಅಥವಾ ಗುರುತಿನ ಚೀಟಿ ತೋರಿಸಿದರೆ ಮಾನ್ಯ ಮಾಡುವಂತೆ ಸ್ಪಷ್ಟ ಸೂಚನೆ ನೀಡಿದರೂ ಕೂಡ ಶುಕ್ರವಾರ ನಗರದ ಕೆಲವು ಕಡೆ ಪತ್ರಕರ್ತರನ್ನು ತಡೆದ ಪೊಲೀಸ್ ಅಧಿಕಾರಿಯೊಬ್ಬರು ಈ ಪಾಸ್ ಆಗುವುದಿಲ್ಲ. ಉಪವಿಭಾಗದ (ಕಂದಾಯ) ಸಹಾಯಕ ಆಯುಕ್ತರ ಪಾಸ್ ಬೇಕು ಎಂದು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಒಂದು ಆದೇಶ ನೀಡಿದರೆ, ಅಧೀನ ಅಧಿಕಾರಿಗಳು-ಸಿಬ್ಬಂದಿ ವರ್ಗವು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಬೇಕಾಬಿಟ್ಟಿ ಅನುಷ್ಠಾನಗೊಳಿಸಲು ಮುಂದಾಗುತ್ತಿರುವುದರ ನೇರ ಪರಿಣಾಮ ಜನಸಾಮಾನ್ಯರ ಮೇಲೆ ಬೀಳುತ್ತಿರುವುದು ವಿಪರ್ಯಾಸ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News