ಉಡುಪಿ: 15 ಮಂದಿಯ ಸ್ಯಾಂಪಲ್ ವರದಿ ಬಾಕಿ

Update: 2020-04-03 14:40 GMT

ಉಡುಪಿ, ಎ.2: ಶಂಕಿತ ನೋವೆಲ್ ಕೊರೋನ ವೈರಸ್ ಸೋಂಕಿಗಾಗಿ ಇಂದು ಕೇವಲ ಇಬ್ಬರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದು, ಇವರಿಬ್ಬರೂ ಉಸಿರಾಟದ ತೊಂದರೆಗಾಗಿ ಆಸ್ಪತ್ರೆಗೆ ಬಂದಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಶುಕ್ರವಾರ ಒಟ್ಟು 11 ಮಂದಿಯ ಗಂಟಲು ದ್ರವದ ಸ್ಯಾಂಪಲ್‌ನ್ನು ಶಂಕಿತ ಕೋವಿಡ್-19 ಸೋಂಕಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇವು ಎಲ್ಲವೂ ಕೋವಿಡ್ ಸಂಪರ್ಕಿತರ ಸ್ಯಾಂಪಲ್‌ಗಳಾಗಿವೆ ಎಂದವರು ತಿಳಿಸಿದರು.

ನಿನ್ನೆಯವರೆಗೆ ಬರಬೇಕಾಗಿದ್ದ 20 ಮಂದಿಯ ಸ್ಯಾಂಪಲ್‌ಗಳ ಪರೀಕ್ಷೆಯಲ್ಲಿ 16 ಮಂದಿಯ ವರದಿ ತಮ್ಮ ಕೈಸೇರಿದ್ದು, ಇವೆಲ್ಲವೂ ಸೋಂಕಿಗೆ ನೆಗೆಟಿವ್ ಆಗಿವೆ ಎಂದು ಡಾ.ಸೂಡ ತಿಳಿಸಿದರು. ಹೀಗಾಗಿ ಉಳಿದ ನಾಲ್ವು ಹಾಗೂ ಇಂದಿನ 11 ಸೇರಿದಂತೆ ಒಟ್ಟು 15 ಮಂದಿಯ ಸ್ಯಾಂಪಲ್‌ನ ವರದಿ ಇನ್ನು ಬರಬೇಕಾಗಿದೆ. ಈ ಮೂಲಕ ಇದುವರೆಗೆ ಕಳುಹಿಸಿದ 192 ಮಂದಿಯ ಸ್ಯಾಂಪಲ್‌ಗಳಲ್ಲಿ 174 ಮಂದಿಯ ವರದಿ ನೆಗೆಟಿವ್ ಆಗಿ ಬಂದಿದ್ದರೆ, ಮೂವರದ್ದು ಮಾತ್ರ ಪಾಸಿಟಿವ್ ಆಗಿದೆ ಎಂದವರು ವಿವರಿಸಿದರು.

ಶುಕ್ರವಾರ 68 ಮಂದಿಯೂ ಸೇರಿದಂತೆ ಇದುವರೆಗೆ ಒಟ್ಟು 1956 ಮಂದಿ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ 157 (ಇಂದು 15) ಮಂದಿ 28 ದಿನಗಳ ನಿಗಾ ಪೂರೈಸಿದ್ದರೆ, 957 (124) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ. ಒಟ್ಟು 825 ಮಂದಿ ಹೋಮ್ ಕ್ವಾರಂಟೈನ್ ಹಾಗೂ 166 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ. ಇಂದು 10 ಮಂದಿ ಸೇರಿದಂತೆ ಈವರೆಗೆ ಒಟ್ಟು 130 ಮಂದಿ ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದರು.

ಎಂದಿನಂತೆ ಜಿಲ್ಲೆಯ ಆರೋಗ್ಯ ಇಲಾಖೆಯ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಬಾರಕೂರು ಸೇರಿದಂತೆ ಜಿಲ್ಲೆಯ ವಿವಿದೆಡೆಗಳಲ್ಲಿ ಮನೆಯಲ್ಲಿ ಕ್ವಾರಂಟೈನ್‌ನಲ್ಲಿರುವವರ ಬಳಿ ತೆರಳಿ ವಿವರಣೆಗಳನ್ನು ಪಡೆದರು. ಝೂಮ್ ಕಾಲ್ಸ್ ಮೂಲಕ ಸಿಬ್ಬಂದಿಗಳಿಗೆ ತರಬೇತಿ, ಮೀಟಿಂಗ್‌ಗಳನ್ನು ನಡೆಸಲಾಯಿತು. ಆರೋಗ್ಯ ಸಹಾಯಕಿಯರ ತಂಡ ವಲಸೆ ಕಾರ್ಮಿಕ ಕಾಲನಿಗಳಿಗೆ ತೆರಳಿ ಅವರ ಆರೋಗ್ಯ ಪರೀಕ್ಷೆಗಳನ್ನು ನಡೆಸಿದೆ ಎಂದು ಡಾ.ಸೂಡ ತಿಳಿಸಿದರು.

ಕೊರೋನ ಜಾಗೃತಿ: ಉಡುಪಿ ತಾಲೂಕು ಆರೋಗ್ಯ ಕೇಂದ್ರ ವ್ಯಾಪ್ತಿಯ ಬಾರಕೂರು, ಮಲ್ಪೆ, ಪೆರ್ಣಂಕಿಲ, ಸಾಸ್ತಾನ, ಕುಂದಾಪುರ ತಾಲೂಕು ಆರೋಗ್ಯ ಕೇಂದ್ರ ವ್ಯಾಪ್ತಿಯ ಸಿದ್ಧಾಪುರ, ಕಿರಿಮಂಜೇಶ್ವರ, ನಾಡ, ಮಾಳ, ಕಾರ್ಕಳ ತಾಲೂಕು ಆರೋಗ್ಯ ಕೇಂದ್ರ ವ್ಯಾಪ್ತಿಯ ಇರ್ವತ್ತೂರು, ಬೆಳ್ಮಣ್ಣು, ದುರ್ಗಾ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಕೋವಿಡ್-19ರ ಕುರಿತು ಜಾಗೃತಿ ಮತ್ತು ಮಾಹಿತಿ ನೀಡುವ ಕಾರ್ಯ ಮಾಡಿದರು. ಅಲ್ಲದೇ ಹೋಮ್ ಕ್ವಾರಂಟೈನ್ ಇರುವ ಮನೆಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಪಂ ಅಧ್ಯಕ್ಷರ ಮಾನವೀಯತೆ: ಇದೇ ವೇಳೆ ಉಡುಪಿ ಸರಕಾರಿ ಮಹಿಳಾ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಯಲ್ಲಿ ಕೊಲ್ಲೂರು ಗ್ರಾಪಂ ವ್ಯಾಪ್ತಿಯ ಮಾವಿನಕಾರು ಗ್ರಾಮದ ಮಹಿಳೆಯೊಬ್ಬರು ಹೆರಿಗೆಗೆಂದು ದಾಖಲಾಗಿದ್ದು, ಲಾಕ್‌ಡೌನ್ ಕಾರಣ ಮನೆಗೆ ತೆರಳಲು ಸಾಧ್ಯವಾಗದೇ ಆತಂಕಿತರಾಗಿದ್ದರು.

ಕೊನೆಗೆ ಅವರು ದೂರವಾಣಿ ಮೂಲಕ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಅವರಿಗೆ ವಿಷಯ ತಿಳಿಸಿ ಮನವಿ ಮಾಡಿದ್ದು, ಇದಕ್ಕೆ ಸ್ಪಂಧಿಸಿದ ದಿನಕರ ಬಾಬು, ತಮ್ಮ ಕಾರಿನಲ್ಲೇ ತಾಯಿ-ಮಗುವನ್ನು ಅವರ ಮನೆಗೆ ಸುರಕ್ಷಿತವಾಗಿ ತಲುಪಿಸಿ ಮಾನವೀಯತೆ ಮೆರೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News