ಲಾಕ್ ಡೌನ್: ದ.ಕ.ಜಿಲ್ಲೆಯ ಗ್ರಾಹಕರಿಗೆ ‘ಮೀನು-ಮಾಂಸ’ ಅಲಭ್ಯ

Update: 2020-04-03 15:01 GMT

ಮಂಗಳೂರು, ಎ.3: ಮೀನು ಮತ್ತು ಮಾಂಸ ಮಾರಾಟಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆಗೆದು ಹಾಕಲಾಗಿದ್ದರೂ ಕೂಡ ಮಾರುಕಟ್ಟೆಯಲ್ಲಿ ಮೀನು ಮತ್ತು ಮಾಂಸದ ಕೊರತೆಯಿಂದ ಗ್ರಾಹಕರಿಗೆ ಇವೆರೆಡೂ ಅಲಭ್ಯವಾಗುತ್ತಿದೆ.

ಮಾ.22ರಿಂದ ಜನತಾ ಕರ್ಫ್ಯೂ ವಿಧಿಸಿದ ಬಳಿಕ ‘ಜನಸಾಮಾನ್ಯರು ಮತ್ತು ವ್ಯಾಪಾರಿಗಳು’ ಭಾಗಶಃ ತತ್ತರಿಸಿದ್ದರು. ತದನಂತರ ದಿನಸಿ ಅಂಗಡಿಯನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದ್ದರೂ ಕೂಡ ಮೀನು ಮತ್ತು ಮಾಂಸದ ವ್ಯಾಪಾರಕ್ಕೆ ಸ್ಪಷ್ಟ ಸೂಚನೆ ಇರಲಿಲ್ಲ.

ಮೀನುಗಾರಿಕೆಯನ್ನು ಬಂದ್ ಮಾಡಿದ ಕಾರಣ ಬಂದರ್ ದಕ್ಕೆ ಕೂಡ ಬಿಕೋ ಎನ್ನುತ್ತಿದೆ. ಇವೆಲ್ಲದರ ಮಧ್ಯೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರಿಂದ ಜಾನುವಾರುಗಳ ಸಾಗಾಟಕ್ಕೂ ಅಡಚಣೆ ಉಂಟಾಗಿತ್ತು. ಹಾಗಾಗಿ ನಗರದ ಮಾರುಕಟ್ಟೆಗಳಲ್ಲಿ ತರಕಾರಿ ಮತ್ತು ಹಣ್ಣು, ಹಂಪಲು ಯಥೇಚ್ಛವಾಗಿ ಸಿಗುತ್ತಿದೆಯಾದರೂ ಕೂಡ ಜಾನುವಾರು ಸಾಗಾಟವಾಗದ ಕಾರಣ ಮಾಂಸದ ಅಂಗಡಿಗಳು ತೆರೆದಿಲ್ಲ.

ಜನತಾ ಕರ್ಫ್ಯೂನಿಂದಾಗಿ ಮಾಂಸ ವ್ಯಾಪಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ದಿನಸಿ ಅಂಗಡಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವಾಗ ಮಾಂಸ ವ್ಯಾಪಾರಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿರಲಿಲ್ಲ. ಇದೀಗ ಮಾಂಸ ವ್ಯಾಪಾರಕ್ಕೆ ಅವಕಾಶ ಸಿಕ್ಕರೂ ಜಾನುವಾರುಗಳ ಪೂರೈಕೆ ಆಗುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಎ.2ರಿಂದ ಖಾಸಗಿ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಿದ ಕಾರಣ ಮಾರುಕಟ್ಟೆಗೆ ಗ್ರಾಹಕರೇ ಬರುತ್ತಿಲ್ಲ. ಹಾಗಾಗಿ ನಾವು ಅಂಗಡಿ ತೆರೆದರೂ ಕೂಡ ಪ್ರಯೋಜನವಿಲ್ಲ ಎಂದು ದ.ಕ.ಜಿಲ್ಲಾ ಮಾಂಸ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಲಿ ಹಸನ್ ತಿಳಿಸಿದ್ದಾರೆ.

ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿಯು ಸಾಂಪ್ರದಾಯಿಕ ಮೀನುಗಾರಿಕೆಗೆ ಅಂದರೆ ಬೋಟ್ ಹೊರತುಪಡಿಸಿದಂತೆ ನಾಡದೋಣಿ, ಗಿಲ್‌ನೆಟ್ ಹಾಗೂ ಕಡಲ ಮತ್ತು ನದಿಯ ಬದಿ ಸಾಗಿ ಮೀನು ಹಿಡಿಯಲು ಅವಕಾಶ ಮಾಡಿಕೊಟ್ಟಿದೆ. ಆದರೆ ಬಂದರ್ ದಕ್ಕೆಯಲ್ಲಿದ್ದ 5 ಸಾವಿರಕ್ಕೂ ಅಧಿಕ ಕಾರ್ಮಿಕರು ಊರಿಗೆ ತೆರಳಿದ್ದಾರೆ. ಅವರು ಸದ್ಯ ಮರಳಿ ಬರಲು ಸಾಧ್ಯವಿಲ್ಲ. ಹೀಗಾಗಿ ಮೀನುಗಾರಿಕೆಗೆ ಅವಕಾಶ ಎಂಬ ಹೇಳಿಕೆಯು ಅಭಾಸವಾಗುತ್ತದೆ. ಲಭ್ಯ ಮೀನಿನ ದರ ಕೂಡ ದುಬಾರಿಯಾದ ಕಾರಣ ಮೊದಲೇ ಕೊರೋನ ಹೊಡೆತಕ್ಕೆ ಸಿಲುಕಿದ ಜನಸಾಮಾನ್ಯರಿಗೆ ಇದೆಲ್ಲಾ ಹೊರೆಯಾಗಬಹುದು ಎಂದು ರಾಜ್ಯ ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News