ಲಾಕ್‌ಡೌನ್ ನಡುವೆಯೂ ದೇಗುಲಗಳಲ್ಲಿ ಜನಸಂದಣಿ: ಸಾಮಾಜಿಕ ಅಂತರ ನಿಯಮಗಳ ಉಲ್ಲಂಘನೆ

Update: 2020-04-03 16:05 GMT

ಹೊಸದಿಲ್ಲಿ, ಎ.3: ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರಕಾರವು ಲಾಕ್‌ಡೌನ್ ಘೋಷಿಸಿದ್ದರೂ, ರಾಮನವಮಿ ಹಬ್ಬದ ಹಿನ್ನೆಲೆ ಯಲ್ಲಿ ಪ.ಬಂಗಾಳದ ಕೋಲ್ಕತಾದಿಂದ ಹಿಡಿದು ಮಹಾರಾಷ್ಟ್ರದ ಶಿರಡಿಯ ತನಕ ವಿವಿಧ ದೇವಸ್ಥಾನಗಳಲ್ಲಿ, ಮಂದಿರಗಳಲ್ಲಿ ಭಕ್ತಾದಿಗಳ ಅಪಾರ ಜನಸಂದಣಿ ಕಂಡುಬಂದಿರುವುದು ತೀವ್ರ ಆತಂಕ ಮೂಡಿಸಿದೆ.

ಕೊರೋನ ವೈರಸ್ ಸೋಂಕು ತಡೆಗೆ ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳಬೇಕೆಂಬ ಸರಕಾರದ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿ ಜನರು ದೇವ ಸ್ಥಾನಗಳಲ್ಲಿ ಜಮಾಯಿಸಿದ್ದ ಬಗ್ಗೆ ವೈದ್ಯಕೀಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ

ಪಶ್ಚಿಮಬಂಗಾಳದ ಬಹುತೇಕ ದೇವಾಲಯಗಳಲ್ಲಿ ಕಳೆದ ಎರಡು ದಿನಗಳಿಂದ ದಟ್ಟ ಜನಸಂದಣಿ ಕಂಡುಬರುತ್ತಿದೆ. ದೇವಸ್ಥಾನಗಳಲ್ಲಿ ಗುಂಪು ಸೇರದಂತೆ ಮತ್ತು ತಕ್ಷಣವೇ ಮನೆಗೆ ಮರಳುವಂತೆ ಪೊಲೀಸರು ಭಕ್ತಾದಿಗಳು ಪದೇ ಪದೇ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಆದಾಗ್ಯೂ ರಾಮನವಮಿ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಹಾಗೂ ಇತರ ಬಲಪಂಥೀಯ ಸಂಘಟನೆಗಳು ವರ್ಷಂಪ್ರತಿ ನಡೆಸುವ ಧಾರ್ಮಿಕ ರ್ಯಾಲಿಗಳನ್ನು ಈ ಸಲ ಕೈಬಿಡಲಾಗಿದೆ.

 ರಾಮನವಿಯ ದಿನವಾದ ಗುರುವಾರ ಕೋಲ್ಕತಾದ ಬೆಲಿಯಾಘಾಟಾ ಹಾಗೂ ಮಾನಿಕ್‌ತಾಲಾ ದೇವಾಲಯಗಳ ಹೊರಗೆ ಭಕ್ತಾದಿಳು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು. ಭಕ್ತಾದಿಗಳನ್ನು ನಿಯಂತ್ರಿಸಲು ದೇವಾಲಯದ ಗೇಟುಗಳನ್ನು ಮುಚ್ಚಬೇಕು ಹಾಗೂ ಭಕ್ತಾದಿಗಳು ಯೋಗ್ಯವಾದ ಅಂತರವಿಟ್ಟುಕೊಂಡು ಸರತಿ ಸಾಲಿನಲ್ಲಿ ನಿಲ್ಲಬೇಕೆಂದು ನಗರ ಪೊಲೀಸ್ ಅಧಿಕಾರಿಗಳು ನಿರ್ದೇಶನಗಳನ್ನು ನೀಡಿದ್ದರು.

ಈ ಮಧ್ಯೆ ಮಹಾರಾಷ್ಟ್ರದ ಪ್ರಸಿದ್ಧ ಯಾತ್ರಾಸ್ಥಳವಾದ ಶಿರಡಿಯಲ್ಲೂ ಸಾಮಾಜಿಕ ಅಂತರದ ನಿಯಮಗಳನ್ನು ಉಲ್ಲಂಘಿಸಿದ ಬಗ್ಗೆ ವರದಿಗಳು ಬಂದಿವೆ. ಶಿರಡಿಯಲ್ಲಿ ಶ್ರೀಸಾಯಿಬಾಬಾ ದೇವಾಲಯದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಅವರ ಕುಟುಂಬವು ನಡೆಸಿದ ರಾಮನವಮಿಯ ಪೂಜೆಯಲ್ಲಿ ಪಾಲ್ಗೊಂಡಿದ್ದವರು ಮಾಸ್ಕ್‌ಗಳನ್ನು ಕೂಡಾ ಧರಿಸಿರಲಿಲ್ಲವೆಂದು ತಿಳಿದುಬಂದಿದೆ.

ತೆಲಂಗಾಣದ ಭದ್ರಾಚಲಂನ ಶ್ರೀ ಸೀತಾರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ಗುರುವಾರ ಆಯೋಜಿಸಲಾದ ಸೀತಾರಾಮ ಕಲ್ಯಾಣ ಉತ್ಸವದಲ್ಲಿ ಭಾರೀ ಸಂಖ್ಯೆಯ ಜನರು ಪಾಲ್ಗೊಂಡಿದ್ದರು. ಈ ಸಲದ ಸೀತಾರಾಮ ಕಲ್ಯಾಣ ಉತ್ಸವವನ್ನು ಸಾರ್ವಜನಿಕರಿಗೆ ನಿಷೇಧಿಸಲಾಗಿತ್ತು. ಆದರೆ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಹೊರಗೆ ನಿಂತಿದ್ದ ಭಕ್ತಾದಿಗಳು ದೇವರ ದರ್ಶನ ಪಡೆಯಲು ಒಳಗೆ ಧಾವಿಸಿಬಂದರೆಂದು ವರದಿಗಳು ತಿಳಿಸಿವೆ. ಈ ಕಾರ್ಯಕ್ರಮದಲ್ಲಿ ತೆಲಂಗಾಣದ ಧಾರ್ಮಿಕದತ್ತಿ ಸಚಿವ ಎ. ಇಂದ್ರಕರಣ್ ರೆಡ್ಡಿ ಹಾಗೂ ಸಾರಿಗೆ ಸಚಿವ ಪೂವಾ ಅಜಯ್‌ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News