ಆರ್ಥಿಕ ಕ್ರಮಗಳಿಲ್ಲದ ಪೊಳ್ಳು ಹೇಳಿಕೆ: ದೀಪ ಬೆಳಗಿಸುವ ಮೋದಿ ಸಲಹೆಗೆ ವಿಪಕ್ಷಗಳ ಟೀಕೆ

Update: 2020-04-05 14:19 GMT

ಹೊಸದಿಲ್ಲಿ, ಎ.3: ಕೊರೊನ ವೈರಸ್ ವಿರುದ್ಧದ ಹೋರಾಟದ ಕ್ರಮವಾಗಿ ಎಪ್ರಿಲ್ 5ರಂದು ರಾತ್ರಿ 9 ಗಂಟೆಗೆ ದೀಪ ಬೆಳಗಿಸಿ ಎಂಬ ಪ್ರಧಾನಿ ಮೋದಿಯ ಸಂದೇಶಕ್ಕೆ ವಿಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಪ್ರಧಾನಿಯ ಸಂದೇಶ ಯಾವುದೇ ವಾಸ್ತವಿಕ ಆರ್ಥಿಕ ಕ್ರಮಗಳ ಘೋಷಣೆಯಿಲ್ಲದ ಕೇವಲ ಪೊಳ್ಳು ಸಾಂಕೇತಿಕ ಹೇಳಿಕೆಯಾಗಿದೆ ಎಂದು ವಿಪಕ್ಷಗಳು ಟೀಕಿಸಿವೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಮಾಡಿರುವ ಟ್ವೀಟ್‌ನಲ್ಲಿ ಪ್ರಧಾನಿಯನ್ನು ಪ್ರಧಾನ ಶೋಮ್ಯಾನ್ ಎಂದು ಉಲ್ಲೇಖಿಸಲಾಗಿದೆ.

ಮೋದಿ ಸಂದೇಶವನ್ನು ಟೀಕಿಸಿರುವ ಕಾಂಗ್ರೆಸ್ ಮುಖಂಡ ಅಭಿಷೇಕ್ ಸಿಂಘ್ವಿ, ಜನರಿಗೆ ಅನಗತ್ಯ ಮನೆಗೆಲಸ ನೀಡುವುದನ್ನು ಪ್ರಧಾನಿ ಮೋದಿ ನಿಲ್ಲಿಸಬೇಕು. ಲಾಕ್‌ಡೌನ್‌ನಿಂದ ವಲಸೆ ಕಾರ್ಮಿಕರಿಗೆ ಎದುರಾಗಿರುವ ಸಂಕಷ್ಟವನ್ನು ನಿವಾರಿಸುವ ಕ್ರಮದ ಬಗ್ಗೆ ಪ್ರಧಾನಿ ಚಿಂತಿಸಬೇಕು ಎಂದಿದ್ದಾರೆ.

“ಪ್ರಧಾನಿ ಮೋದಿಯವರ ಸಂದೇಶವನ್ನು ನಾವು ಕೇಳಿದ್ದೇವೆ. ಈಗ ಪ್ರಧಾನಿಯವರು ಅರ್ಥಶಾಸ್ತ್ರಜ್ಞರು, ಸಾಂಕ್ರಾಮಿಕ ರೋಗ ತಜ್ಞರ ಮಾತುಗಳನ್ನು ದಯವಿಟ್ಟು ಕೇಳಬೇಕು ಎಂದು ನಾವು ಬಯಸುತ್ತೇವೆ” ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಟ್ವೀಟ್ ಮಾಡಿದ್ದಾರೆ.

“ವಾಸ್ತವತೆಯನ್ನು ಅರಿತುಕೊಳ್ಳಿ ಮಿ.ಮೋದಿ” ಎಂದು ತೃಣಮೂಲ ಕಾಂಗ್ರೆಸ್‌ನ ಸಂಸದ ಮಹುವಾ ಮೊಯಿತ್ರ ಪ್ರತಿಕ್ರಿಯಿಸಿದ್ದಾರೆ. ವಾಸ್ತವ ಪರಿಸ್ಥಿತಿಯನ್ನು ಅರಿತುಕೊಳ್ಳಿ. ಅಸಾಧ್ಯವಾದುದಕ್ಕಾಗಿ ಆಶಿಸಬೇಡಿ ಎಂದು ಮೊಹಿತ್ರ ಟ್ವೀಟ್ ಮಾಡಿದ್ದಾರೆ.

ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿರುವ ಬಿಜೆಪಿ ಮುಖಂಡ ಬಿಎಲ್ ಸಂತೋಷ್, “ಪ್ರಧಾನಿ ಮೋದಿ ರಕ್ಷಕನಂತೆ ದೇಶದ ಜನತೆಯಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಿದ್ದಾರೆ. ಆದರೆ ಕೆಲಸದವರ ನೆರವಿಲ್ಲದೆ ತಮ್ಮ ಒಂದು ಮಗು ಅಥವಾ ಸಾಕುಪ್ರಾಣಿಯನ್ನೂ ಸರಿಯಾಗಿ ಪಾಲಿಸಲು ಆಗದ , ಸದಾ ಅನುಮಾನದಿಂದಲೇ ಇರುವವರಿಗೆ ಈ ಸಂದೇಶ ಅಸಮಾಧಾನ ತಂದಿದೆ. ಅವರು ವಸ್ತುಸ್ಥಿತಿ, ಅಂಕಿಅಂಶ ಮತ್ತು ಹೊಸ ಕಾರ್ಯನೀತಿಯನ್ನು ಬಯಸುತ್ತಿದ್ದಾರೆ. ಆದರೆ ಪ್ರಧಾನಿ 130 ಕೋಟಿ ಪ್ರಜೆಗಳನ್ನು ಮತ್ತು ಅತ್ಯಂತ ವಿಚ್ಛಿದ್ರಕಾರಿ ಉದಾರ ಪರಿಸರ ವ್ಯವಸ್ಥೆಯನ್ನು ನಿರ್ವಹಿಸಬೇಕಿದೆ” ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News