ಸಿಂಗಾಪುರದ ಸರಕು ಸಾಗಾಟ ನೌಕೆ ಎ.4ರಂದು ನಿರ್ಗಮನ, ಯಾವುದೇ ಆತಂಕ ಬೇಡ: ಎಂಆರ್‌ಪಿಎಲ್ ಸ್ಪಷ್ಟನೆ

Update: 2020-04-03 16:33 GMT

ಮಂಗಳೂರು, ಎ.3: ನವಮಂಗಳೂರು ಬಂದರಿಗೆ ಸಿಂಗಾಪುರದಲ್ಲಿ ನೊಂದಣಿಗೊಂಡ ಸರಕು ಸಾಗಾಟ ನೌಕೆಯು ಎಪ್ರಿಲ್ ಎರಡರಂದು ಮುಂಜಾನೆ 3 ಗಂಟೆಗೆ ಎಂಆರ್‌ಪಿಎಲ್ ತೈಲ ಉತ್ಪನ್ನಗಳನ್ನು (ಡೀಸೆಲನ್ನು)ಪಡೆಯಲು ಆಗಮಿಸಿದ್ದು, ಸರಕಾರದ ಎಲ್ಲ ನಿಯಮಾವಳಿಗಳ ಪ್ರಕಾರ ಆಗಮಿಸಿದೆ. 

ಕೊರೋನ ತಡೆಗೆ ಸಂಬಂಧಿಸಿದ ಎಲ್ಲಾ ನಿರ್ದೇಶನಗಳನ್ನು ಪಾಲಿಸಲಾಗಿದೆ. ಡಿಜಿ ಶಿಪ್ಪಿಂಗ್‌ನ ನಿಯಮಾವಳಿ ಮೇರೆಗೆ ನವಮಂಗಳೂರು ಬಂದರಿಗೆ ಆಗಮಿಸಲು ನೌಕೆಗೆ ಅನುಮತಿ ನೀಡಲಾಗಿದೆ. ನಾವು ನಮ್ಮ ಯಾವುದೇ ಸಿಬ್ಬಂದಿಯನ್ನು ಕೊರೋನ ಸೋಂಕು ಇರುವ ಹಡಗಿಗೆ ಕಳುಹಿಸಲು ಸಾಧ್ಯವಿಲ್ಲ. ಜನರು ಆತಂಕಗೊಂಡಿರುವ ಸಂದರ್ಭದಲ್ಲಿ ಈ ಬಗ್ಗೆ ಚೀನಾದ ಹಡಗು ಬಂದಿದೆ ಎಂಬುದಾಗಿ ವದಂತಿ ಹರಡಿದ್ದು, ಇದು ಸತ್ಯಕ್ಕೆ ದೂರವಾದದ್ದು. ಈ ಬಗ್ಗೆ ಯಾರೂ ಆತಂಕ ಪಡಬೇಕಾಗಿಲ್ಲ. ಹಡಗು ಎಪ್ರಿಲ್ 4ರಂದು ಸಿಂಗಾಪುರಕ್ಕೆ ತೆರಳಲಿದ್ದು, ಕೊರೋನ ಸೋಂಕಿನ ಬಗ್ಗೆ ಯಾವುದೇ ಆತಂಕ ಬೇಡ. ಈ ಬಗ್ಗೆ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಎಂಆರ್‌ಪಿಎಲ್‌ನ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

ಸದ್ರಿ ಹಡಗು ಮಂಗಳೂರು ಆಗಮಿಸಬೇಕಾದರೆ ಕೇಂದ್ರ ನೌಕಾ ನಿರ್ದೇಶನಾಲಯದ ಮಾರ್ಗದರ್ಶಿ ನಿಯಮಾವಳಿಯನ್ನು ಪಾಲಿಸಬೇಕಾಗಿದೆ. ಸದ್ರಿ ನಿಯಮಾವಳಿ ಪ್ರಕಾರ ಮಂಗಳೂರಿಗೆ ಆಗಮಿಸುವ ಹಡಗು ಇಲ್ಲಿಗೆ ಆಗಮಿಸುವುದಕ್ಕೆ ಮೊದಲು ತೆರಳಿರುವ ಹತ್ತು ಬಂದರುಗಳು ಯಾವುದು?, ಆ ಬಂದರುಗಳಲ್ಲಿ ಸಾಂಕ್ರಾಮಿಕ ರೋಗಗಳು ಇತ್ತೇ?, ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕ್ವಾರಂಟೈನ್ ಮೂಲಕ ಇಡಲಾಗಿದೆಯೇ? ಹಡಗನ್ನು ಚಲಾಯಿಸುವ ಕ್ಯಾಪ್ಟನ್ ಮತ್ತು ಸಿಬ್ಬಂದಿ ಆರೋಗ್ಯದ ಪರಿಸ್ಥಿತಿ ಹೇಗಿದೆ ? ಅವರಲ್ಲಿ ಯಾರಿಗಾದರೂ ಸಾಂಕ್ರಾಮಿಕ ರೋಗದ ಲಕ್ಷಣಗಳಿವೆಯೇ ? ಈ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಲಭಿಸಿದ ಬಳಿಕ ಹಡಗು ಬಂದರು ಮಂಡಳಿಯ ಅನುಮತಿ ಪಡೆದು ಪ್ರವೇಶಿಸುತ್ತದೆ. ಎಲ್ಲ ನಿಯಮಾವಳಿಗಳನ್ನು ಪಾಲಿಸಿರುವ ಕಾರಣ ಹಡಗು ಮಂಗಳೂರು ಬಂದರಿಗೆ ಆಗಮಿಸಿದೆ. ಏಕಾಏಕಿ ಹಡಗನ್ನು ಎಂಆರ್‌ಪಿಎಲ್ ತರಿಸಿಕೊಳ್ಳುವುದು ಸಾಧ್ಯವಿಲ್ಲ. ಕೊರೋನ ಸೋಂಕು ದೇಶದಲ್ಲಿ ಹರಡುತ್ತಿರುವ ಸಂದರ್ಭದಲ್ಲಿ ಸರಕಾರದ ನಿರ್ದೇಶನದ ಪ್ರಕಾರ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಸರಕು ಸಾಗಾಟದ ಬಗ್ಗೆ ಕ್ರಮ ಕೈ ಗೊಳ್ಳಲಾಗಿದೆ ಎಂದು ಎಂಆರ್‌ಪಿಎಲ್‌ನ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News