ಎಪಿಎಂಸಿಗೆ ಸ್ಥಳಾಂತರವಾಗದ ಹಣ್ಣು-ತರಕಾರಿ ಸಗಟು ವ್ಯಾಪಾರ!

Update: 2020-04-03 16:48 GMT

ಮಂಗಳೂರು, ಎ.3: ಸೆಂಟ್ರಲ್ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಹಣ್ಣು ಹಾಗೂ ತರಕಾರಿ ಸಗಟು ವ್ಯಾಪಾರವನ್ನು ಬೈಕಂಪಾಡಿಯ ಎಪಿಎಂಸಿಗೆ ಸ್ಥಳಾಂತರಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದು, ಈ ಬಗ್ಗೆ ಎ. 4ರಂದು ನಡೆಯಲಿರುವ ವರ್ತಕರ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ನಿರ್ಧರಿಸಿದೆ.

ಎ. 3ರಿಂದ ಹಣ್ಣು ಹಾಗೂ ತರಕಾರಿ ಸಗಟು ವ್ಯಾಪಾರವನ್ನು ಬೈಕಂಪಾಡಿಯ ಎಪಿಎಂಸಿಯಲ್ಲಿ ನಿರ್ವಹಿಸಬೇಕು. ಸಗಟು ವ್ಯಾಪಾರಿಗಳು ಚಿಲ್ಲರೆ ವ್ಯಾಪಾರಿಗಳಿಗೆ ಮಾತ್ರ ಅಲ್ಲಿ ಮಾರಾಟ ಮಾಡುವಂತೆ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ನಿನ್ನೆ ನೀಡಿದ್ದ ಆದೇಶದಲ್ಲಿ ತಿಳಿಸಿದ್ದರು.

ಆದರೆ ಅಲ್ಲಿ ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಹಾಗೂ ಅದು ನಗರದಿಂದ ಸಾಕಷ್ಟು ಕಿ.ಮೀ. ದೂರವಿರುವ ಕಾರಣ ಸಗಟು ವ್ಯಾಪಾರಿಗಳು ಅಲ್ಲಿಗೆ ಹೋಗಲು ಹಿಂದೇಟು ಹಾಕಿದ್ದರು. ಮಾತ್ರವಲ್ಲದೆ, ರಿಟೇಲ್ ವ್ಯಾಪಾರಸ್ಥರು ಕೂಡಾ ಅಲ್ಲಿಗೆ ಬರುವುದು ಕಷ್ಟವಾದ್ದರಿಂದ ಸದ್ಯ ವಹಿವಾಟನ್ನೇ ನಿಲ್ಲಿಸಲು ವರ್ತಕರು ನಿರ್ಧರಿಸಿದ್ದರು. ಈ ಬಗ್ಗೆ ಮಧ್ಯಾಹ್ನ ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಡಾ. ಭರತ್ ಶೆಟ್ಟಿ ಸಭೆ ನಡೆಸಿ ವರ್ತಕರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

‘‘ಸೆಂಟ್ರಲ್ ಮಾರುಕಟ್ಟೆಯಲ್ಲಿ ಖರೀದಿಗೆ ಜನಜಂಗುಳಿಯಾಗುವುದರಿಂದ ತಾತ್ಕಾಲಿಕವಾಗಿ 15ರಿಂದ 1 ತಿಂಗಳ ಅವಧಿಗೆ ಎಪಿಎಂಸಿಯ ವಿಶಾಲವಾದ ಪ್ರದೇಶದಲ್ಲಿ ವ್ಯವಹಾರ ಸ್ಥಳಾಂತರಿಸುವಂತೆ ಶಾಸಕರು ವರ್ತಕರಲ್ಲಿ ಮನವಿ ಮಾಡಿದ್ದಾರೆ. ಇಂತಹ ತುರ್ತು ಸಂದರ್ಭದಲ್ಲಿ ವ್ಯಾಪಾರಕ್ಕಿಂತಲೂ ನಾವು ಜಿಲ್ಲಾಡಳಿತದ ಜತೆಗೆ ಕೈಜೋಡಿಸಬೇಕಿದೆ. ಹಾಗಾಗಿ ಈ ಬಗ್ಗೆ ನಾಳೆ ಹೋಲ್‌ಸೇಲ್ ವ್ಯಾಪಾರಸ್ಥರು ಬೆಳಗ್ಗೆ 11 ಗಂಟೆಗೆ ಸಭೆ ಸೇರಿ ಈ ಬಗ್ಗೆ ನಿರ್ಧರಿಸಲಾಗುವುದು. ನಾವು ನಿರ್ಧಾರ ಕೈಗೊಂಡ ಬಳಿಕ ಎಪಿಎಂಸಿಯಲ್ಲಿ ಈಗಿರುವ ಪೊದೆ, ಮರಗಳನ್ನು ಕಡಿದು ಸಮತಟ್ಟು ಗೊಳಿಸಿ ಸ್ವಚ್ಛಗೊಳಿಸಿ ವ್ಯವಸ್ಥೆ ಮಾಡುವ ಭರವಸೆಯನ್ನು ಶಾಸಕರು ನೀಡಿದ್ದಾರೆ’’ ಎಂದು ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ ತಿಳಿಸಿದ್ದಾರೆ.

‘‘ಸಗಟು ವ್ಯಾಪಾರಿಗಳ ವರ್ತಕರ್ತರ ತಂಡ ಇಂದು ಎಪಿಎಂಸಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿ ವ್ಯಾಪಾರ ನಡೆಸುವಂತಿಲ್ಲ. ನಾವು ಹೋಗಲು ನಿರ್ಧರಿಸಿದರೆ ತಾತ್ಕಾಲಿಕ ವ್ಯಾಪಾರಕ್ಕೆ ವ್ಯವಸ್ಥೆ ಮಾಡಿಕೊಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ನಾಳೆ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗುವುದು. ಹಾಗಿದ್ದರೂ ಅಲ್ಲಿನ ಈಗಿರುವ ಸ್ಥಿತಿಯಲ್ಲಿ ವ್ಯವಸ್ಥೆಯನ್ನು ಸರಿಪಡಿಸಲು ಕನಿಷ್ಠ 2 ದಿನಗಳಾದರೂ ಬೇಕಾಗಬಹುದು. ಅಲ್ಲಿಯವರೆಗೆ ಬರುವ ತರಕಾರಿ ಹಣ್ಣು ಪೂರೈಕೆಗೆ ವ್ಯವಸ್ಥೆ ಮಾಡಿದ್ದರೆ ಉತ್ತಮವಾಗಿರುತ್ತಿತ್ತು’’ ಎಂದು ಅವರು ಹೇಳಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯಲ್ಲಿ ರಾತ್ರಿ 11ರಿಂದ 4 ಗಂಟೆಯವರೆಗೆ ಸಗಟು ವ್ಯಾಪಾರಸ್ಥರು ರಿಟೇಲ್ ವ್ಯಾಪಾರಸ್ಥರಿಗೆ ತರಕಾರಿ ಹಾಗೂ ಹಣ್ಣು ಹಂಪಲು ಮಾರಾಟಕ್ಕೆ ಅವಕಾಶವನ್ನು ಜಿಲ್ಲಾಡಳಿತ ಕಲ್ಪಿಸಿತ್ತು. ಆದರೆ ಬುಧವಾರ ರಾತ್ರಿ ಸೆಂಟ್ರಲ್ ಮಾರುಕಟ್ಟೆಯಲ್ಲಿ ಖರೀದಿಗಾಗಿ ವ್ಯಾಪಾರಸ್ಥರು ಅಧಿಕ ಸಂಖ್ಯೆಯಲ್ಲಿ ಸೇರಿದ್ದ ಕಾರಣ ಮುಂಜಾಗೃತಾ ಕ್ರಮವಾಗಿ ಹಣ್ಣು ಹಾಗೂ ತರಕಾರಿ ಸಗಟು ವ್ಯಾಪಾರವನ್ನು ಬೈಕಂಪಾಡಿಯ ಎಪಿಎಂಸಿಗೆ ಜಿಲ್ಲಾಧಿಕಾರಿ ಸ್ಥಳಾಂತರಿಸಿ ಆದೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News