ವಿದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ತೆರವುಗೊಳಿಸಲು ಸಾಧ್ಯವಿಲ್ಲ: ಕೇಂದ್ರ ಸರಕಾರ

Update: 2020-04-03 16:49 GMT

ಹೊಸದಿಲ್ಲಿ, ಎ.3: ಭಾರತವು ಲಾಕ್‌ಡೌನ್ ಸನ್ನಿವೇಶದಲ್ಲಿರುವುದರಿಂದ ಬಾಂಗ್ಲಾದೇಶ ಅಥವಾ ಇತರ ಯಾವುದೇ ಕೊರೋನ ವೈರಸ್‌ ಸೋಂಕು ಬಾಧಿತ ದೇಶಗಳಿಂದ ಭಾರತೀಯರನ್ನು ತೆರವುಗೊಳಿಸಲು ತನಗೆ ಈಗ ಸಾಧ್ಯವಾಗಲಾರದೆಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ತಿಳಿಸಿದೆ.

“ಕೋವಿಡ್-19 ಸೋಂಕಿನಿಂದ ಪೀಡಿತವಾದ ರಾಷ್ಟ್ರಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಲ್ಲಿಂದ ಆಗಮಿಸುವವರಿಂದ ಗಂಭೀರವಾದ ಅಪಾಯವಿದ್ದು, ಅದನ್ನು ಕಡಿಮೆಗೊಳಿಸಲು ಸರಕಾರ ಪ್ರಯತ್ನಿಸುತ್ತಿದೆ. ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರಿಗೆ ನೆರವಾಗುವಂತೆ ಹಾಗೂ ಅವರಿಗೆ ಸೌಲಭ್ಯಗಳನ್ನು ಏರ್ಪಡಿಸಿಕೊಡುವಂತೆ ಆಯಾಯ ದೇಶಗಳ ಭಾರತೀಯ ರಾಯಭಾರಿ ಕಚೇರಿಗಳಿಗೆ ಸೂಚಿಸಲಾಗಿದೆ’’ ಎಂದು ವಿದೇಶಾಂಗ ಸಚಿವಾಲಯವು ದಿಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ ಅಫಿದಾವಿತ್‌ನಲ್ಲಿ ತಿಳಿಸಿದೆ.

ಕೊರೋನಾ ವೈರಸ್ ಹಾವಳಿಯಿಂದಾಗಿ ಬಾಂಗ್ಲಾದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ವಿದ್ಯಾರ್ಥಿಗಳನ್ನು ತೆರವುಗೊಳಿಸುವಂತೆ ವಿದೇಶಾಂಗ ಇಲಾಖೆಗೆ ಆದೇಶ ನೀಡಬೇಕೆಂದು ಕೋರಿ ನ್ಯಾಯವಾದಿ ಗೌರವ್ ಕುಮಾರ್ ಬನ್ಸಾಲ್ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಸಚದೇವಾ ಹಾಗೂ ನವೀನ್ ಚಾವ್ಲಾ ಅ ವರಿದ್ದ ನ್ಯಾಯಪೀಠವು ವಿದೇಶಾಂಗ ಇಲಾಖೆಯಿಂದ ವಿವರಣೆ ಕೇಳಿತ್ತು.

“ಭಾರತ ಹಾಗೂ ಬಾಂಗ್ಲಾ ಈ ಎರಡೂ ದೇಶಗಳಲ್ಲಿ ಲಾಕ್‌ಡೌನ್ ಹೇರಲಾಗಿದೆ. ಈ ಸನ್ನಿವೇಶದಲ್ಲಿ ಬಾಂಗ್ಲಾ ಅಥವಾ ಇನ್ನಾವುದೇ ದೇಶಗಳಿಂದ ಭಾರತೀಯ ಪ್ರಜೆಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲ. ಹೀಗಾಗಿ, ಭಾರತದೊಳಗೆ ಕೊರೋನ ವೈರಸ್ ಹಾವಳಿ ತಡೆಗಟ್ಟುವ ಹಾಗೂ ಆಂತರಿಕವಾಗಿ ಈ ಮಹಾಸೋಂಕು ರೋಗವನ್ನು ನಿಯಂತ್ರಿಸಲು ದೇಶದ ಆರೋಗ್ಯ ವ್ಯವಸ್ಥೆಗೆ ಅನುವು ಮಾಡಿಕೊಡುವುದಕ್ಕಾಗಿ ವಿದೇಶಗಳಲ್ಲಿರುವ ಭಾರತೀಯರು ಅವರು ಎಲ್ಲಿದ್ದಾರೋ ಅಲ್ಲಿಯೇ ಉಳಿಯಬೇಕೆಂಬ ನಿಲುವನ್ನು ಹೊಂದಿದೆಯೆಂದು’’ ಎಂದು ವಿದೇಶಾಂಗ ಇಲಾಖೆ ಅಫಿದಾವಿತ್‌ನಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News