ದುಡಿಯುವ ವರ್ಗದ ಹಿತ ಕಾಪಾಡಲು ಸಿಪಿಐ-ಎಐಟಿಯುಸಿ ಮನವಿ

Update: 2020-04-03 17:16 GMT

ಮಂಗಳೂರು, ಎ.3: ಕೊರೋನ ಸೋಂಕನ್ನು ತಡೆಗಟ್ಟುವ ಸಲುವಾಗಿ ವಿಧಿಸಲಾದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಮಾಜದ ಕೆಳವರ್ಗದ ಜನರು ಅದರಲ್ಲೂ ಅಸಂಘಟಿತ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಅಂಗಡಿಗಳಲ್ಲಿ ಕೆಲಸ ಮಾಡುವವರು, ಹಮಾಲರು, ಅಟೋ ಹಾಗೂ ಸರಕು ಸಾಗಣಿಕೆ ವಾಹನ ಚಾಲಕರು, ಚಮ್ಮಾರರು, ಗ್ಯಾರೇಜುಗಳಲ್ಲಿ ಕೆಲಸ ಮಾಡುವವರು, ಮನೆಗೆಲಸ ಮಾಡುವವರು ಭಾರೀ ತೊಂದರೆಗೊಳಗಾಗಿದ್ದಾರೆ. ಈ ಮಧ್ಯೆ ಕಟ್ಟಡ ಕಾರ್ಮಿಕರ ನಿಧಿಯಿಂದ ಎಲ್ಲಾ ನೋಂದಾಯಿತ ಕಾರ್ಮಿಕರ ಖಾತೆಗೆ 1,000 ರೂ. ಜಮೆ ಮಾಡಲು ಸರಕಾರ ಆದೇಶಿಸಿದ್ದರೂ ಕೂಡ ಇದುವರೆಗೆ ಜಮೆಯಾಗಿಲ್ಲ. ಅಲ್ಲದೆ ಈ ಮೊತ್ತವನ್ನು 5,000ಕ್ಕೆ ಏರಿಸಿ ಅವರ ಖಾತೆಗೆ ಕೂಡಲೇ ಜಮೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸಿಪಿಐ ಹಾಗೂ ಎಐಟಿಯುಸಿ ಆಗ್ರಹಿಸಿದೆ.

ಅವಿಭಜಿತ ದಕ ಜಿಲ್ಲೆಯ ಆರ್ಥಿಕತೆಯ ಮೂಲವಾಗಿರುವ ಬೀಡಿ ಕೈಗಾರಿಕೆಯಲ್ಲಿ ಸಾಧಾರಣ 4 ಲಕ್ಷ ಜನ (ಮುಖ್ಯವಾಗಿ ಮಹಿಳೆಯರು) ದುಡಿಯುತ್ತಿದ್ದು ಅವರ ಸ್ಥಿತಿಯು ಬಹಳಷ್ಟು ಕಂಗೆಟ್ಟಿದೆ. ಮಾ. 19ರಿಂದ ಬೀಡಿ ಉದ್ಯಮ ನಿಂತುಹೋಗಿದೆ. ತಾವು ಕಟ್ಟಿದ ಬೀಡಿಗೆ ಅನುಗುಣವಾಗಿ ಅವರಿಗೆ ದೊರೆಯುತ್ತಿದ್ದ ಕೂಲಿಯೂ ಇಲ್ಲವಾಗಿದೆ. ಕೆಲಸ ಕೊಡಲಾಗದಿದ್ದರೂ ಸಂಬಳ ಪಾವತಿಸಬೇಕೆಂಬ ಸರಕಾರದ ಆದೇಶ ಪಾಲನೆಯಾಗಿಲ್ಲ. ಆದ್ದರಿಂದ ಬೀಡಿ ಕಾರ್ಮಿಕರ ಬಗ್ಗೆ ಸರಕಾರ ಯೋಜನೆಯೊಂದನ್ನು ರೂಪಿಸಿ ಜಾರಿಗೊಳಿಸಲು ಒತ್ತಾಯಿಸಿದೆ.

ಪಡಿತರ ವ್ಯವಸ್ಥೆ ವರ್ಗಭೇದವಿಲ್ಲದೆ ಎಲ್ಲರಿಗೂ ಸಿಗುವಂತಾಗಬೇಕು. ಸಾಮಾಜಿಕ ಅಂತರದಿಂದ ನಶಿಸಿಹೋಗಿರುವ ಕುಟುಂಬ ಆದಾಯದ ಶೇ.75 ಹಣವನ್ನು ಸರಕಾರ ನೀಡಬೇಕು. ಎಲ್ಲಾ ಪಂಚಾಯತ್ ಮಟ್ಟದಲ್ಲಿ ಗಂಜಿಕೇಂದ್ರಗಳನ್ನು ತೆರೆಯಬೇಕು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಫಲಾನುಭಗಳಿಗೆ ಮುಂಗಡ ಹಣ ನೀಡಬೇಕು. ಸಾಮಾಜಿಕ ಅಂತರ ಸಮಯದಲ್ಲಿ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದ ಕಾರ್ಮಿಕರಿಗೆ, ಈ ಸಮಯವನ್ನು ಕೆಲಸದ ದಿನ ಎಂದು ಪರಿಗಣಿಸಿ ಕನಿಷ್ಠ ಸಂಬಳ ಕೊಡಲೇಬೇಕು ಎಂಬ ಕಾನೂನು ಜಾರಿಗೊಳಿಸಿ ಸಂಬಳ ಕೊಡದಿರುವುದನ್ನು ಕ್ರಿಮಿನಲ್ ಅಪರಾಧ ಎಂದು ಪರಿಣಿಸಬೇಕು ಎಂದು ಸಿಪಿಐ ಪಕ್ಷದ ವಿ ಕುಕ್ಯಾನ್ ಹಾಗೂ ಎಐಟಿಯುಸಿ ಮುಖಂಡರಾದ ಎಚ್‌ವಿ ರಾವ್ ಮತ್ತು ಕೆವಿ ಭಟ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News