×
Ad

"ಬ್ರಿಟನ್‍ ನಲ್ಲಿ ಇಷ್ಟು ಉತ್ತಮ ಚಿಕಿತ್ಸೆ ಲಭಿಸಬಹುದು ಎನ್ನುವ ಭರವಸೆ ನನಗಿಲ್ಲ"

Update: 2020-04-05 16:10 IST

ತಿರುವನಂತಪುರ: ಬ್ರಿಟನ್‍ ನಲ್ಲಿ ಕೂಡಾ ಕೊರೋನಾ ವೈರಸ್ ಸೋಂಕಿಗೆ ಕೇರಳಕ್ಕಿಂತ ಉತ್ತಮ ಚಿಕಿತ್ಸೆ ಲಭಿಸುತ್ತದೆ ಎಂಬ ಭರವಸೆ ನನಗಿಲ್ಲ ಎಂದು ಕೇರಳದಲ್ಲಿ ಚಿಕಿತ್ಸೆ ಪಡೆದು ಕೋವಿಡ್-19 ಸೋಂಕಿನಿಂದ ಗುಣಮುಖರಾದ ಬ್ರಿಟಿಷ್ ಪ್ರಜೆ ಬ್ರಿಯಾನ್ ಲಾಕ್‍ವುಡ್ (57)  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದಿಂದ ಬಾಧಿತವಾದ ರಾಜ್ಯಗಳ ಪೈಕಿ ಕೇರಳ ಕೂಡಾ ಒಂದಾಗಿದ್ದು, ಇದುವರೆಗೆ 306 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ 50 ಮಂದಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎನ್ನುವುದು ಗಮನಾರ್ಹ ಅಂಶ. ಕೇರಳದಲ್ಲಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಏಳು ಮಂದಿ ವಿದೇಶೀಯರೂ ಇದ್ದಾರೆ.

ಪತ್ನಿ ಸೇರಿ ಇತರ 18 ಮಂದಿಯೊಂದಿಗೆ ಕೇರಳ ಪ್ರವಾಸಕ್ಕೆ ಆಗಮಿಸಿದ್ದ ಲಾಕ್‍ ವುಡ್ ಅವರಿಗೆ ಕೋವಿಡ್ ಸೊಂಕು ತಗುಲಿರುವುದು ದೃಢಪಟ್ಟಿತ್ತು. ವಿಮಾನದಲ್ಲಿ ದುಬೈಗೆ ಹೊರಡುವ ಮುನ್ನ ಇವರಿಗೆ ಸೋಂಕು ತಗುಲಿರುವುದು ದೃಢಪಟ್ಟ ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಆಸ್ಪತ್ರೆಯಿಂದ ಅವರು ಬಿಡುಗಡೆಯಾಗಿದ್ದಾರೆ.

indiatoday.inಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. “ಕೆಲ ದಿನಗಳಿಂದ ಜ್ವರ ಇದ್ದ ಹಿನ್ನೆಲೆಯಲ್ಲಿ ಕೊಟ್ಟಾಯಂನಲ್ಲಿ ತಪಾಸಣೆ ಮಾಡಿಸಿಕೊಂಡಾಗ ಕೋವಿಡ್-19 ಸೋಂಕಿನ ಪರೀಕ್ಷೆಗೆ ಗುರಿಪಡಿಸಲಾಯಿತು. ತಕ್ಷಣ ಮುನ್ನಾರ್‍ ನಲ್ಲಿ ಹೋಟೆಲ್ ಕೊಠಡಿಯೊಂದರಲ್ಲಿ ನಾನು ಹಾಗೂ ಪತ್ನಿ ಪ್ರತ್ಯೇಕವಾಗಿ ಇದ್ದೆವು. ಇಬ್ಬರಿಗೂ ನೆಗೆಟಿವ್ ಫಲಿತಾಂಶ ಬಂದಿತ್ತು. ಮರುದಿನ ಎಲ್ಲರೂ ವಿಮಾನದಲ್ಲಿ ದುಬೈಗೆ ತೆರಳಲು ನಿರ್ಧರಿಸಿದೆವು. ಪಾಸಿಟಿವ್ ಫಲಿತಾಂಶ ಬಂದಿದ್ದರೆ ಹೋಗುವ ನಿರ್ಧಾರ ಮಾಡುತ್ತಿರಲಿಲ್ಲ" ಎಂದು ವಿವರಿಸಿದರು. "ವಿಮಾನ ನಿಲ್ದಾಣದ ಗೇಟ್‍ ನಲ್ಲಿ ನನ್ನ ಹೆಸರು ಕೂಗಿದಾಗ ಗೊಂದಲವಾಯಿತು. ಬಳಿಕ ನಿಜ ತಿಳಿದಾಗ ಭಯವಾಯಿತು" ಎಂದು ವಿವರಿಸಿದರು.

“ನಾನು ಹಾಗೂ ಪತ್ನಿ ಪ್ರತ್ಯೇಕವಾಗಿ ಪರೀಕ್ಷೆಗೆ ಒಳಪಟ್ಟೆವು. ಎಕ್ಸ್‍ರೇ ಮಾಡಿಸಿದಾಗ ನನಗೆ ನ್ಯುಮೋನಿಯಾ ಪತ್ತೆಯಾಯಿತು. ಡಾ.ಫತಾಹುದ್ದಿನ್ ಹಾಗೂ ಡಾ.ಜಾಕೋಬ್ ಅವರು ಎಚ್‍ಐವಿ ನಿರೋಧಕ ಔಷಧ ಮತ್ತು ಇತರ ವೈರಸ್ ನಿರೋಧಕ ಔಷಧಗಳ ನಡುವಿನ ಆಯ್ಕೆ ಮುಂದಿಟ್ಟರು. ಅವರ ಕಾಳಜಿ ಹಾಗೂ ವೃತ್ತಿಪರತೆಯಿಂದಾಗಿ ನಾನು ಚಿಕಿತ್ಸೆಗೆ ಒಪ್ಪಿಕೊಂಡೆ. ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ವೆಂಟಿಲೇಟರ್ ನೆರವು ನೀಡಲಾಯಿತು. ನಾನು ಚೇತರಿಸಿಕೊಳ್ಳಲು ಅದು ನೆರವಾಯಿತು" ಎಂದು ನೆನಪಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News