'ಮುಸ್ಲಿಂ ವ್ಯಾಪಾರಿಗಳಿಗೆ ಪ್ರವೇಶವಿಲ್ಲ' : ಕೊರೋನ ಬಿಕ್ಕಟ್ಟಿನ ನಡುವೆ ಕೊಲ್ಯದಲ್ಲಿ ಕೋಮುದ್ವೇಷದ ಭಿತ್ತಿಪತ್ರ !
ಮಂಗಳೂರು, ಎ.5: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾ.ಹೆ.66ರ ಸೋಮೇಶ್ವರ ಸಮೀಪದ 2ನೆ ಕೊಲ್ಯದಲ್ಲಿ ದುಷ್ಕರ್ಮಿಗಳು ಕೋಮುದ್ವೇಷ ಹರಡುವ ಭಿತ್ತಿಪತ್ರಗಳನ್ನು ಹಾಕಿರುವುದು ಬೆಳಕಿಗೆ ಬಂದಿದೆ. ಈ ಭಿತ್ತಿಪತ್ರಗಳ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ಭಿತ್ತಿಪತ್ರದಲ್ಲಿ, "ಸೂಚನೆ.... 2ನೆ ಕೊಲ್ಯ ಕನೀರ್ ತೋಟ ನಾಗರಿಕರ ಹಿತದೃಷ್ಟಿಯಿಂದ ಕೊರೋನ ವೈರಸ್ ಸಂಪೂರ್ಣವಾಗಿ ಹೋಗುವವರೆಗೆ ನಮ್ಮ ಊರಿಗೆ ಯಾವುದೇ ಮುಸಲ್ಮಾನ ವ್ಯಾಪಾರಿಗೆ ಪ್ರವೇಶವಿಲ್ಲ. ಹಿಂದೂ ಬಾಂಧವರು 2ನೆ ಕೊಲ್ಯ... ಎಂದು ಬರೆಯಲಾಗಿದೆ.
ಈ ಭಿತ್ತಿಪತ್ರಗಳು ವಿದ್ಯುತ್ ಮತ್ತು ಟೆಲಿಫೋನ್ ಕಂಬಗಳಲ್ಲಿ ಕಾಣಿಸುತ್ತಿವೆ. ರವಿವಾರ 2ನೆ ಕೊಲ್ಯ ಪರಿಸರದ ಅನೇಕ ಕಡೆ ಇದು ಕಂಡುಬಂದಿದೆ. ಅಂದಹಾಗೆ, ಇದನ್ನು ಹಾಕಿದವರು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ. ಈಗಲೂ ಈ ಭಿತ್ತಿಪತ್ರಗಳು ಇರುವುದನ್ನು ಸ್ಥಳೀಯರು ಖಚಿತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಕೋಮುಪ್ರಚೋದಕ ಪೋಸ್ಟರ್ ಗಳ ಫೋಟೊ ಹರಿದಾಡುತ್ತಿದ್ದರೂ ಕೂಡ ಪೊಲೀಸರು ಯಾವುದೇ ಕ್ರಮ ಜರುಗಿಸದ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜನಪ್ರತಿನಿಧಿಗಳ ಜಾಣ ಮೌನವನ್ನು ಖಂಡಿಸಿದ್ದಾರೆ.
ಈಗಾಗಲೆ ಈ ವಿಚಾರವನ್ನು ಜಿಲ್ಲಾಧಿಕಾರಿಯ ಗಮನಕ್ಕೆ ತಂದಿರುವುದಾಗಿ ಮಾನವ ಹಕ್ಕುಗಳ ಹೋರಾಟಗಾರ ಕಬೀರ್ ಉಳ್ಳಾಲ್ ತಿಳಿಸಿದ್ದಾರೆ.