×
Ad

ಮನೆಯಲ್ಲೇ ‘ಗರಿಗಳ ರವಿವಾರ’ ಆಚರಿಸಿದ ಕ್ರೈಸ್ತರು

Update: 2020-04-05 17:50 IST

ಮಂಗಳೂರು, ಎ.5: ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರಕಾರ ಲಾಕ್‌ಡೌನ್ ಘೋಷಿಸಿದ್ದರಿಂದ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಬಲಿ ಪೂಜೆಗಳನ್ನು ಎ.14 ರ ತನಕ ತಾತ್ಕಾಲಿಕವಾಗಿ ರದ್ದುಪಡಿಸಿದ ಹಿನ್ನೆಲೆಯಲ್ಲಿ ‘ಗರಿಗಳ ರವಿವಾರ’ವನ್ನು ಕ್ರೆಸ್ತರು ರವಿವಾರ ತಮ್ಮ ಮನೆಗಳಲ್ಲೇ ಆಚರಿಸಿದರು.

ಮನೆಗಳಲ್ಲಿಯೇ ಇದ್ದ ಕ್ರೈಸ್ತರು ಆನ್‌ಲೈನ್ ಮೂಲಕ ಪ್ರಸಾರವಾದ ಗರಿಗಳ ರವಿವಾರದ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಮಂಗಳೂರು ಧರ್ಮಪ್ರಾಂತದ ಬಿಷಪ್ ರೈ. ರೆ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ರೊಝಾರಿಯೋ ಕೆಥೆಡ್ರಲ್‌ನಲ್ಲಿ ಬಲಿಪೂಜೆಯನ್ನು ಅರ್ಪಿಸಿದರು. ಇದನ್ನು ಖಾಸಗಿ ವಾಹಿನಿ ಹಾಗೂ ಯೂಟ್ಯೂಬ್ ಮೂಲಕ ನೇರ ಪ್ರಸಾರ ಮಾಡಲಾಗಿತ್ತು. ಕೆಥೆಡ್ರಲ್‌ನ ರೆಕ್ಟರ್ ಫಾ. ಜೆ.ಬಿ. ಕ್ರಾಸ್ತಾ ಮತ್ತು ಸಹಾಯಕ ಗುರು ಫಾ. ಫ್ಲೇವಿಯನ್ ಲೋಬೊ ಉಪಸ್ಥಿತರಿದ್ದರು.

ಆರಂಭದಲ್ಲಿ ಕೆಥೆಡ್ರಲ್‌ನ ಮುಖ್ಯದ್ವಾರದ ಬಳಿ ತೆಂಗಿನ ಗರಿಗಳನ್ನು ಬಿಷಪ್ ಆಶೀರ್ವದಿಸಿದರು ಹಾಗೂ ಬಳಿಕ ಗರಿಗಳನ್ನು ಹಿಡಿದು ಕೆಥೆಡ್ರಲ್‌ನ ಒಳಗೆ ಪ್ರವೇಶಿಸಿದರು. ಬಲಿ ಪೂಜೆಯ ವೇದಿಕೆಯಲ್ಲಿ ಬಿಷಪ್ ಮತ್ತು ಜತೆಗಿದ್ದ ಇಬ್ಬರು ಗುರುಗಳು ಕ್ರೈಸ್ತರ ಪವಿತ್ರ ಗ್ರಂಥ ಬೈಬಲ್‌ನ ವಾಚನವನ್ನು ನೆರವೇರಿಸಿದರು. ಫಾ. ಫ್ಲೇವಿಯನ್ ಲೋಬೊ ಪ್ರವಚನ ನೀಡಿದರು.

ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಮಾತನಾಡಿ, ಮಾರಕ ರೋಗ ಕೊರೋನ ಜಗತ್ತಿನಾದ್ಯಂತ ಹರಡುತ್ತಿರುವ ಈ ಸಂದರ್ಭ ಜನರು ಕಷ್ಟ ಸಂಕಷ್ಟಗಳಿಗೆ ಒಳಗಾಗಿದ್ದಾರೆ. ಇಂತಹ ಸಂದರ್ಭ ಯಾರೂ ಸಹನೆಯನ್ನು ಕಳೆದುಕೊಳ್ಳದೆ, ದೇವರ ಮೇಲಿನ ವಿಶ್ವಾಸವನ್ನು ಮತ್ತಷ್ಟು ಬಲ ಪಡಿಸಬೇಕು. ಏಸು ಕ್ರಿಸ್ತರ ಬದುಕು ಈ ದಿಶೆಯಲ್ಲಿ ಪ್ರೇರಣೆಯಾಗಿದೆ ಎಂದರು.

ಕೊರೋನ ರೋಗಿಗಳು ಬೇಗನೆ ಗುಣಮುಖರಾಗುವಂತೆ ಹಾಗೂ ರೋಗಿಗಳ ಆರೈಕೆಯಲ್ಲಿ ತೊಡಗಿರುವ ವೈದ್ಯರು, ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಬೇಕೆಂದ ಬಿಷಪ್ ಈ ಕಾಯಿಲೆಗೆ ಔಷಧ ಕಂಡು ಹಿಡಿಯುವ ವಿಜ್ಞಾನಿಗಳ ಪ್ರಯತ್ನ ಆದಷ್ಟು ಶೀಘ್ರ ಯಶಸ್ವಿಯಾಗಲಿ ಎಂದು ಆಶಿಸಿದರು.

ಮುಲ್ಕಿಯ ಡಿವೈನ್ ಕಾಲ್ ಸೆಂಟರ್‌ನಲ್ಲಿ ಫಾ. ಅಬ್ರಹಾಂ ಡಿಸೋಜಾ ಹಾಗೂ ಉಡುಪಿಯ ಬಿಷಪ್ ರೈ ರೆ ಡಾ. ಜೆರಾಲ್ಡ್ ಐಸಾಕ್ ಲೋಬೊ ಗರಿಗಳ ರವಿವಾರದ ಪ್ರಾರ್ಥನಾ ವಿಧಿ ಮತ್ತು ಬಲಿ ಪೂಜೆ ನಡೆಸಿದರು.

ಏಸು ಕ್ರಿಸ್ತರು ಶುಕ್ರವಾರ ದಿನ ಶಿಲುಬೆಯಲ್ಲಿ ಮರಣವನ್ನಪ್ಪುವ ಮುಂಚಿನ ರವಿವಾರದಂದು ಜೆರುಸಲೆಮಿಗೆ ಪ್ರವೇಶಿಸುವಾಗ ಆಲ್ಲಿನ ಜನರು ಒಲಿವ್ ಮರದ ಗರಿಗಳನ್ನು ಹಿಡಿದು ವೈಭವಯುತವಾಗಿ ಸ್ವಾಗತಿಸಿದ ಘಟನೆಯ ಸಂಕೇತವಾಗಿ ಗರಿಗಳ ರವಿವಾರವನ್ನು ಆಚರಿಸಲಾಗುತ್ತಿದೆ. ಇಲ್ಲಿ ತೆಂಗಿನ ಗರಿಗಳನ್ನು ಹಿಡಿದು ಪ್ರಾರ್ಥನೆ ನಡೆಸಲಾಗುತ್ತಿದೆ. ಗರಿಗಳ ರವಿವಾರದಿಂದ ಮೊದಲ್ಗೊಂಡು ಪವಿತ್ರ ಸಪ್ತಾಹ ಆರಂಭವಾಗುತ್ತದೆ. ಗುರುವಾರ ಏಸುಕ್ರಿಸ್ತರ ಕೊನೆಯ ಭೋಜನದ ದಿನ, ಶುಭ ಶುಕ್ರವಾರ ಏಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನ, ಶನಿವಾರ ರಾತ್ರಿ ಈಸ್ಟರ್ ಹಬ್ಬದ ಜಾಗರಣೆ ಹಾಗೂ ರವಿವಾರ ಏಸು ಕ್ರಿಸ್ತರ ಪುನರುತ್ಥಾನದ ದಿನದ ಹಬ್ಬವನ್ನು ಆಚರಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News