ಆಸ್ಪತ್ರೆಯ ಸಿಬ್ಬಂದಿಯ ಬಳಿ ಐಸಿಯು ಕೀಲಿಕೈ ಇಲ್ಲ: ಅನಾರೋಗ್ಯ ಪೀಡಿತ ಮಹಿಳೆ ಮೃತ್ಯು

Update: 2020-04-05 14:28 GMT

ಮಧ್ಯಪ್ರದೇಶ: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಐಸಿಯು ಘಟಕದ ಕೀಲಿಕೈ ವೈದ್ಯರಿಗೆ ಸಿಗದ ಕಾರಣ ಮೃತಪಟ್ಟ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.

ಉಸಿರಾಟದ ತೊಂದರೆ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದ ಮಹಿಳೆಯೊಬ್ಬರನ್ನು ಉಜ್ಜಯಿನಿ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರಿಸ್ಥಿತಿ ಕೈಮೀರಿದಾಗ ಮಹಿಳೆಯನ್ನು ಮಾಧವ್ ನಗರದ ಆಸ್ಪತ್ರೆಗೆ ದಾಖಲಿಸಲು ವೈದ್ಯರು ನಿರ್ಧರಿಸಿದರು. ಈ ಆಸ್ಪತ್ರೆಯನ್ನು ಕೊರೋನ ವೈರಸ್ ಸೋಂಕಿತರಿಗಾಗಿ ಮೀಸಲಿಡಲಾಗಿದೆ. ಈ ಮಹಿಳೆಯನ್ನೂ ಕೊರೋನ ವೈರಸ್ ಪರೀಕ್ಷೆಗೆ ಒಳಪಡಿಸಲಾಗಿತ್ತು.

ನಂತರ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಲಾಯಿತು. ಆ್ಯಂಬುಲೆನ್ಸ್ ಆಸ್ಪತ್ರೆಗೆ ತಲುಪಿದಾಗ ಐಸಿಯುಗೆ ಬೀಗ ಹಾಕಲಾಗಿತ್ತು ಮತ್ತು ಸಂಬಂಧಪಟ್ಟ ಸಿಬ್ಬಂದಿ ಸ್ಥಳದಲ್ಲಿರಲಿಲ್ಲ.

ಹಲವು ಪ್ರಯತ್ನಗಳ ಬಳಿಕ ಐಸಿಯುನ ಬಾಗಿಲನ್ನು ಒಡೆಯಲಾಯಿತು. ಈ ವೇಳೆಗಾಗಲೇ ಮಹಿಳೆಯ ಆರೋಗ್ಯ ಸ್ಥಿತಿ ಕ್ಷೀಣಿಸಿತ್ತು. ಬಾಗಿಲು ಮುರಿದ ನಂತರ ಮಹಿಳೆಯನ್ನು ಉಳಿಸಲು ವೈದ್ಯರಿಗೆ ಸಾಧ್ಯವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News