ಉಡುಪಿ: ಮತ್ತೆ 11 ಮಂದಿಯ ಸ್ಯಾಂಪಲ್ ಪರೀಕ್ಷೆಗೆ
ಉಡುಪಿ, ಎ. 5: ಶಂಕಿತ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿಗಾಗಿ ಇಂದು ಒಟ್ಟು 11 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ರವಿವಾರ ಒಟ್ಟು ಐವರು ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಇವರಲ್ಲಿ ಮೂವರು ಪುರುಷರು ಶಂಕಿತ ಕೊರೋನ ಲಕ್ಷಣ ಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರೆ, ಮತ್ತಿಬ್ಬರು ಉಸಿರಾಟದ ತೊಂದರೆಗಾಗಿ ಆಸ್ಪತ್ರೆಗೆ ಬಂದಿದ್ದಾರೆ ಎಂದವರು ಹೇಳಿದರು.
ಇಂದು ಶಂಕಿತ ಕೋವಿಡ್-19ರ ಸೋಂಕಿಗಾಗಿ ಮೂವರು ಹಾಗೂ ಶಂಕಿತರ ಸಂಪರ್ಕಕ್ಕಾಗಿ ಏಳು ಮಂದಿ ಅಲ್ಲದೇ ಉಸಿರಾಟದ ತೊಂದರೆ ಎದುರಿಸುತ್ತಿರುವ ಒಬ್ಬರ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಈ ವರದಿ ನಾಳೆ ಕೈಸೇರುವ ನಿರೀಕ್ಷೆ ಇದೆ ಎಂದರು.
ನಿನ್ನೆಯವರೆಗೆ ಬರಬೇಕಾಗಿದ್ದ 41 ಮಂದಿಯ ಸ್ಯಾಂಪಲ್‌ಗಳ ಪರೀಕ್ಷೆಯಲ್ಲಿ 12 ವರದಿ ತಮ್ಮ ಕೈಸೇರಿದ್ದು, ಇವೆಲ್ಲವೂ ಸೋಂಕಿಗೆ ನೆಗೆಟಿವ್ ಆಗಿವೆ ಎಂದು ಡಾ.ಸೂಡ ತಿಳಿಸಿದರು. ಹೀಗಾಗಿ ಉಳಿದ 29 ಮಂದಿ ಹಾಗೂ ಇಂದಿನ 11 ಸೇರಿದಂತೆ ಒಟ್ಟು 40 ಮಂದಿಯ ಸ್ಯಾಂಪಲ್ ವರದಿ ಇನ್ನು ಬರಬೇಕಾಗಿದೆ. ಈ ಮೂಲಕ ಇದುವರೆಗೆ ಜಿಲ್ಲೆಯಿಂದ ಕಳುಹಿಸಿದ 233 ಮಂದಿಯ ಸ್ಯಾಂಪಲ್‌ಗಳಲ್ಲಿ 190 ಮಂದಿಯ ವರದಿ ನೆಗೆಟಿವ್ ಆಗಿ ಬಂದಿದ್ದರೆ, ಮೂವರದ್ದು ಮಾತ್ರ ಪಾಸಿಟಿವ್ ಆಗಿದೆ ಎಂದವರು ವಿವರಿಸಿದರು.
ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ರವಿವಾರ ಯಾರೊಬ್ಬರೂ ಕೋವಿಡ್-19ರ ತಪಾಸಣೆಗಾಗಿ ನೋಂದಣಿಗೊಂಡಿಲ್ಲ ಎಂದು ನುಡಿದ ಡಾ.ಸೂಡ, ಹೀಗಾಗಿ ಇದುವರೆಗೆ ಒಟ್ಟು 1976 ಮಂದಿ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ 184 (ಇಂದು 12) ಮಂದಿ 28 ದಿನಗಳ ನಿಗಾ ಪೂರೈಸಿದ್ದರೆ, 1147 (77) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ. ಒಟ್ಟು 718 ಮಂದಿ ಹೋಮ್ ಕ್ವಾರಂಟೈನ್ ಹಾಗೂ 85 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ. ಇಂದು ಮೂವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಡಾ. ಸುಧೀರ್ ಚಂದ್ರ ಸೂಡ ತಿಳಿಸಿದರು.