ಪುತ್ತೂರು ದೇವಳದ ಬಗ್ಗೆ ಅಪಪ್ರಚಾರದ ಆರೋಪ: ದೂರು

Update: 2020-04-05 16:24 GMT

ಪುತ್ತೂರು : ಮಹತೋಬಾರ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೋತ್ಸವಕ್ಕೆ ಧಾರ್ಮಿಕ ದತ್ತಿ ಇಲಾಖೆ ಷರತ್ತುಗಳನ್ನು ಪಾಲಿಸಿಕೊಂಡು ಸರಳವಾಗಿ ಗೊನೆ ಮಹೂರ್ತ ನಡೆಸಲಾಗಿದ್ದು, ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಿರು ಆರೋಪದಲ್ಲಿ ಈ ಕುರಿತು ಕಾನೂನು ಕ್ರಮ ಕೈಗೊಳ್ಳುವಂತೆ ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಪುತ್ತೂರು ನಗರಠಾಣೆಗೆ ದೂರು ನೀಡಿದ್ದಾರೆ.

ನ್ಯೂಸ್ ಚಾನೆಲ್ ಒಂದರಲ್ಲಿ ಬಂದ ಕಾರ್ಯಕ್ರಮಕ್ಕೆ ಪುತ್ತೂರು ದೇವಳದಲ್ಲಿ ನಡೆದ ಗೊನೆ ಮಹೂರ್ತದ ಚಿತ್ರಣ (ಫೋಟೊ) ವನ್ನು ಅಳವಡಿಸಿ ಜನಪ್ರತಿನಿಧಿಗಳ ಹಾಗೂ ದೇವಳದ ಭಕ್ತರ ಮನಸ್ಸಿಗೆ ನೋವುಂಟು ಮಾಡಿದ್ದಲ್ಲದೆ, ಸಮಾಜದಲ್ಲಿ ಕೋಮುವಾದಿ ಆತಂಕ ಸೃಷ್ಟಿಸಲು ಕಿಡಿಗೇಡಿಗಳು ಈ ಕಾರ್ಯ ನಡೆಸಿದ್ದು, ಈ ರೀತಿ ಸಮಾಜದ ಶಾಂತಿ ಕೆಡಿಸಲು ಕೃತ್ಯವೆಸಗಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ. 

ಎಪ್ರಿಲ್ 1 ರಂದು ಗೊನೆ ಮಹೂರ್ತ ನಡೆಸಲಾಗಿದ್ದು, ಅತ್ಯಂತ ಸರಳವಾಗಿ ಈ ಕಾರ್ಯಕ್ರಮ ನಡೆಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರ ನಿರ್ದೇಶನದಂತೆ ಅವರು ವಿಧಿಸಿದ ಎಲ್ಲಾ ಷರತ್ತುಗಳನ್ನು ಸಂಪೂರ್ಣವಾಗಿ ಪಾಲಿಸಲಾಗಿದೆ. ಆದರೂ ಕಿಡಿಗೇಡಿಗಳು ದೇವಳಕ್ಕೆ ಕೆಟ್ಟ ಹೆಸರು ತರುವಂತೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಮಾಡಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News