ಸಾಮಾಜಿಕ ಅಂತರ ಪಾಲಿಸದ ಸಂಸದೆ ಶೋಭಾ ಕರಂದ್ಲಾಜೆ !

Update: 2020-04-05 16:41 GMT

ಕುಂದಾಪುರ, ಎ.5: ಕೋಟೇಶ್ವರದ ಕಾಗೇರಿಯಲ್ಲಿರುವ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿರಾಶ್ರಿತರಿಗೆ ಕಲ್ಪಿಸಿದ ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ರವಿವಾರ ಭೇಟಿ ನೀಡಿದ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸಾಮಾಜಿಕ ಅಂತರ ಪಾಲಿಸದ ಬಗ್ಗೆ ಆರೋಪಗಳು ಕೇಳಿ ಬಂದಿವೆ.

ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದ ಶೋಭಾ ಕರಂದ್ಲಾಜೆ, ಈ ಸಂದರ್ಭ ಅಲ್ಲಿ ಆಶ್ರಯ ಪಡೆದುಕೊಂಡಿರುವ ಕಾರ್ಮಿಕರು, ಅವರ ಮಕ್ಕಳಿಗೆ ತಾವು ತಂದಿದ್ದ ಪ್ರಸಾದ ರೂಪದ ಲಡ್ಡುವನ್ನು ಅವರು ಯಾವುದೇ ಸಾಮಾಜಿಕ ಅಂತರ ಪಾಲಿಸದೆ ವಿತರಿಸಿದರೆನ್ನಲಾಗಿದೆ.

ಮಕ್ಕಳೆಲ್ಲ ಗಂಪುಗುಂಪಾಗಿ ಲಡ್ಡು ಸ್ವೀಕರಿಸಿದರೆ, ಸಂಸದರು ವಿತರಿಸುವಾಗ ಕೂಡ ತಮ್ಮ ಪಕ್ಷದ ಮುಖಂಡರೊಂದಿಗೆ ಗುಂಪಾಗಿ ಸೇರಿ ಲಡ್ಡು ವಿತರಿಸಿರುವುದು ಕಂಡುಬಂದಿದೆ. ಸರಕಾರದ ಆದೇಶವನ್ನು ಪಾಲಿಸುವ ಮೂಲಕ ಜನರಿಗೆ ಮಾದರಿಯಾಗಬೇಕಾಗಿದ್ದ ಜನಪ್ರತಿನಿಧಿಗಳೇ ಈ ರೀತಿ ನಿಯಮ ಗಳನ್ನು ಉಲ್ಲಂಘಿಸಿದರೆ ಹೇಗೆ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.

ದೈನಂದಿನ ದಿನಸಿ/ಅವಶ್ಯಕ ಸಾಮಗ್ರಿಗಳನ್ನು ಯಾವುದೇ ಸಾಮಾಜಿಕ ಅಂತರವನ್ನು ಕಾಪಾಡದೇ ಗುಂಪು ಗುಂಪಾಗಿ ಐದಕ್ಕಿಂತ ಹೆಚ್ಚು ಜನರು ಒಟ್ಟಾಗಿ ತೆರಳಿ ಸಾಮಗ್ರಿಗಳನ್ನು ಹಂಚುವುದು ನಿಷೇಧಾಜ್ಞೆಯ ಉಲ್ಲಂಘನೆಯಾಗುತ್ತದೆ ಎಂದು ಈಗಾಗಲೇ ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News