ಶೋಭಾ ಕರಂದ್ಲಾಜೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ಪಿಎಫ್‌ಐ

Update: 2020-04-05 16:59 GMT

ಮಂಗಳೂರು, ಎ.5: ದಿಲ್ಲಿಯಲ್ಲಿ ನಡೆದ ತಬ್ಲೀಗ್ ಜಮಾಅತ್ ಸಭೆಯಲ್ಲಿ ಪಾಲ್ಗೊಂಡವರ ಕುರಿತು ಸಂಸದೆ ಶೋಭಾ ಕರಂದ್ಲಾಜೆ ನೀಡಿರುವ ಪೂರ್ವಗ್ರಹಪೀಡಿತ ಹೇಳಿಕೆಯನ್ನು ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ ಶೋಭಾ ಕರಂದ್ಲಾಜೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿಝಾಮುದ್ದೀನ್‌ನಲ್ಲಿ ತಬ್ಲೀಗ್ ಜಮಾಅತ್‌ನಲ್ಲಿ ಭಾಗವಹಿಸಿದ್ದವರು ದೇಶಾದ್ಯಂತ ಕೊರೋನ ಹಬ್ಬಿಸುವ ದುಷ್ಕೃತ್ಯ ನಡೆಸಿದ್ದಾರೆ. ಇದರ ಹಿಂದೆ ಕೊರೋನ ಜಿಹಾದ್‌ನ ವಾಸನೆ ಬಡಿಯುತ್ತಿದೆ ಎಂದು ಶೋಭಾ ಹೇಳಿಕೆ ನೀಡಿದ್ದಾರೆ. ವಾಸ್ತವದಲ್ಲಿ ಶೋಭಾರ ಜಿಹಾದ್ ಪದ ಬಳಕೆಯು ನಿರ್ದಿಷ್ಟ ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪಿತೂರಿಯಾಗಿರುತ್ತದೆ. ಕೇಂದ್ರ ಸರಕಾರ ಏಕಾಏಕಿ ಹೇರಿರುವ ಲಾಕ್‌ಡೌನ್ ಕ್ರಮವು ಬಹಳಷ್ಟು ಅವಾಂತರಗಳನ್ನು ಸೃಷ್ಟಿಸಿದ್ದು, ಲಕ್ಷಾಂತರ ಮಂದಿಯನ್ನು ಬೀದಿಪಾಲು ಮಾಡಿದೆ. ಲಾಕ್‌ಡೌನ್‌ಗೂ ಮೊದಲೇ ಮರ್ಕಝ್ ಕೇಂದ್ರದಲ್ಲಿ ಸೇರಿದ್ದ ಸಾವಿರಾರು ಸಂಖ್ಯೆಯ ಜನರನ್ನು ಕೂಡಲೇ ತೆರವುಗೊಳಿಸಲು ವ್ಯವಸ್ಥೆ ಕಲ್ಪಿಸಬೇಕೆನ್ನುವ ಸಂಘಟಕರ ಮನವಿಗೆ ಆಡಳಿತ ವರ್ಗವು ತೋರಿದ ನಿರ್ಲಕ್ಷ್ಯವು ಅಲ್ಲಿನ ಘಟನೆಗೆ ಮೂಲ ಕಾರಣ ಎಂಬುದು ತಿಳಿದ ವಿಚಾರವಾಗಿದೆ. ಆದರೆ ಪೂರ್ವಾಗ್ರಹಪೀಡಿತ ಮಾಧ್ಯಮಗಳು ಈ ಘಟನೆಗೆ ಕೋಮು ಬಣ್ಣ ಹಚ್ಚಿ ಅತಿರಂಜಿತ ವರದಿಯನ್ನು ಪ್ರಕಟಿಸುತ್ತಿವೆ. ಜೊತೆಗೆ ಕೆಲವೊಂದು ಟಿವಿ ಚಾನೆಲ್‌ಗಳು ಘಟನೆಗೆ ಸಂಬಂಧವೇ ಇಲ್ಲದ ಹಳೆಯ ವಿಡಿಯೋಗಳನ್ನು ಪ್ರಸಾರ ಮಾಡಿ ಸಮಾಜದಲ್ಲಿ ಭಯಾತಂಕವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶೋಭಾ ಕರಂದ್ಲಾಜೆ ಈ ಹಿಂದೆಯೂ ಬಹಳಷ್ಟು ಬಾರಿ ಇಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಾ ಸಮಾಜದಲ್ಲಿ ಕೋಮು ಸಾಮರಸ್ಯ ಕದಡಲು ಪ್ರಯತ್ನಿಸಿದ್ದರು. ಇದಕ್ಕಾಗಿ ಅವರ ವಿರುದ್ಧ ಕಾನೂನು ಕ್ರಮವನ್ನೂ ಕೈಗೊಳ್ಳಲಾಗಿತ್ತು. ಇದೀಗ ಮತ್ತೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸುವುದಾಗಿ ಅಶ್ರಫ್ ತಿಳಿಸಿದ್ದಾರೆ. ದಿಲ್ಲಿಯ ತಬ್ಲೀಗ್ ಜಮಾಅತ್ ವಿಚಾರವಾಗಿ ಮುಸ್ಲಿಮರ ತೇಜೋವಧೆ ನಡೆಸುವ ಅಭಿಯಾನವನ್ನು ಮಾಧ್ಯಮಗಳು ಕೈಬಿಡಬೇಕೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News