ಕೋಮು ವಿಷ ಹರಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಿ : ಯುನಿವೆಫ್ ಕರ್ನಾಟಕ

Update: 2020-04-05 17:15 GMT

ಮಂಗಳೂರು, ಎ. 5: ರೋಗಗಳು ಮತ್ತು ನೈಸರ್ಗಿಕ ವಿಪತ್ತುಗಳು ಯಾವುದೇ ಒಂದು ನಿರ್ದಿಷ್ಟ ಕೋಮು ಅಥವಾ ಧರ್ಮಕ್ಕೆ ಸೀಮಿತವಾಗಿರು  ವುದಿಲ್ಲ ಅದು ಜಾತಿ, ಧರ್ಮ ಮತ್ತು ಕೆಲವು ವಿಭಾಗಗಳನ್ನು ಹುಡುಕಿ ಬರುವುದಿಲ್ಲ. ಅದು ಸಾರ್ವತ್ರಿಕವಾಗಿರುತ್ತದೆ ಮತ್ತು ಅದಕ್ಕೆ ಎಲ್ಲರೂ ಬಲಿಯಾಗುತ್ತಾರೆ ಹೀಗಿರುವಾಗ ಕೆಲವು ಕೋಮುವಾದಿ ಮನೋಸ್ಥಿತಿಯು ಸಮಾಜದಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದು, ಅವರು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಸಮಾಜದಲ್ಲಿ ಒಡಕ್ಕುಂಟು ಮಾಡಲು ನಿರ್ದಿಷ್ಟ ಸಮುದಾಯವನ್ನು ಅಪಾರಾಧಿಯ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಆಗ್ರಹಿಸಿದ್ದಾರೆ.

ದಿಲ್ಲಿಯ ನಿಝಾಮುದ್ದೀನ್‌ನಲ್ಲಿ ನಡೆದ ಧಾರ್ಮಿಕ ಸಭೆಯನ್ನು ನೆಪವಾಗಿಟ್ಟು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಮರ ಮೇಲೆ ನಿರಂತರ ಸುಳ್ಳು ಆರೋಪಗಳನ್ನು ಹೊರಿಸುತ್ತಿರುವುದು ಮತ್ತು ಸತ್ಯವನ್ನು ಜನರಿಗೆ ತಲುಪಿಸಬೇಕಾಗಿರುವ ಮಾಧ್ಯಮಗಳು ಅವುಗಳನ್ನು ವಿಕೃತವಾಗಿ ಚಿತ್ರೀಕರಿಸುತ್ತಿರುವುದು ಖೇದಕರ ಮತ್ತು ಖಂಡನೀಯ. ದೇಶಾದ್ಯಂತ ವಿವಿಧ ದೇವಾಲಯಗಳಲ್ಲಿ ಹಾಗು ಮಠಗಳಲ್ಲಿ ಪೂಜಾ ಕಾರ್ಯಕ್ರಮ ನಡೆಯುತ್ತಿದ್ದರೂ ಮುಸಲ್ಮಾನರು ಆಯೋಜಿಸಿದ ಕೆಲವು ಕಾರ್ಯಕ್ರಮವನ್ನು ಮಾತ್ರ ಪ್ರದರ್ಶಿಸಲಾಗುತ್ತದೆ. ಸರಕಾರ ಮಾಡಬೇಕಾದ ಕೆಲಸವನ್ನು ಸಾರ್ವಜನಿಕರು ಮಾಡುತ್ತಿರುವುದು ಅಕ್ಷಮ್ಯ. ಪ್ರತಿಯೊಬ್ಬರು ಈ ಸಂದರ್ಭ ಸರಕಾರದ ನಿರ್ದೇಶನಗಳನ್ನು ಪಾಲಿಸಬೇಕೆಂದು ಮುಸ್ಲಿಮರು ದಿನದ ನಾಲ್ಕು ಸಮಯಗಳಲ್ಲಿ ಮಸೀದಿಯಿಂದ ಘೋಷಣೆ ಮಾಡುತ್ತಿದ್ದರೂ ಕೂಡ ಕೆಲವು ಹಿತಾಸಕ್ತಿಗಳು ಮುಸ್ಲಿಮ್ ಸಮುದಾಯವನ್ನು ರೋಗ ಹರಡುವಿಕೆ ಕಾರಣ ಎಂಬಂತೆ ಬಿಂಬಿಸುವುದು ಖಂಡನೀಯ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News