ಕ್ವಾರಂಟೈನ್ ನಲ್ಲಿ ತುಂಬೆ : ಶಾಸಕ ಖಾದರ್ ನೇತೃತ್ವದಲ್ಲಿ ಅಧಿಕಾರಿಗಳ ಸಭೆ

Update: 2020-04-05 17:30 GMT

ಬಂಟ್ವಾಳ, ಎ. 5: ವ್ಯಕ್ತಿಯೊಬ್ಬರಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತುಂಬೆ ಗ್ರಾಮದ ಕೆಲವು ಪ್ರದೇಶವನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದ್ದು, ಗ್ರಾಮದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ರವಿವಾರ ಸಂಜೆ ಮಂಗಳೂರು ಶಾಸಕ ಯು.ಟಿ.ಖಾದರ್ ತುಂಬೆ ಗ್ರಾಮ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಾಲೋಚನೆ ನಡೆಸಿದರು. 

ಕ್ವಾರಂಟೈನ್ ನಲ್ಲಿರುವ ಪ್ರದೇಶಗಳ ಮನೆಗಳಿಗೆ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡುವುದು, ಪಡಿತರ ಅಕ್ಕಿ ಪೂರೈಕೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು, ಆಶಾ ಕಾರ್ಯಕರ್ತೆಯರು ಮನೆ ಭೇಟಿಯ ವೇಳೆ ಗ್ರಾಮಸ್ಥರು ಸಹಕಾರ ನೀಡುವ ಕುರಿತು ಚರ್ಚಿಸಲಾಯಿತು. 
ಸೋಂಕು ದೃಢಪಟ್ಟಿರುವ ವ್ಯಕ್ತಿಯ ಸಂಪರ್ಕದಲ್ಲಿದ್ದವರ ತಪಾಸಣೆಯ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ತುರ್ತು ಸಂದರ್ಭದಲ್ಲಿ ಗ್ರಾಮಸ್ಥರಿಗೆ ಸಹಕಾರ ನೀಡುವಂತೆ ಪೊಲೀಸ್ ಇಲಾಖೆಗೆ ಶಾಸಕರು ಸೂಚನೆ ನೀಡಿದರು. 

ಸಭೆಯಲ್ಲಿ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಸದಸ್ಯ ಗಣೇಶ್ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಗ್ರಾಮಾಂತರ ಪಿಎಸ್ಐ ಪ್ರಸನ್ನ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುದರ್ಶನ್, ಗ್ರಾಪಂ ಅಧ್ಯಕ್ಷೆ ಹೇಮಾವತಿ, ಪಿಡಿಒ ಚಂದ್ರಾವತಿ, ತುಂಬೆ ಜುಮಾ ಮಸೀದಿಯ ಅಧ್ಯಕ್ಷ ಇಮ್ತಿಯಾಝ್ ಆಲ್ಫಾ, ಪ್ರಧಾನ ಕಾರ್ಯದರ್ಶಿ ಮೂಸಬ್ಬ, ಗ್ರಾಪಂ ಕೆಲವು ಸದಸ್ಯರು, ಸ್ಥಳೀಯ ಮುಖಂಡ ಇರ್ಫಾನ್ ತುಂಬೆ, ಇಸಾಕ್ ಹಾಗೂ ವರ್ತಕರು ಸಭೆಯಲ್ಲಿ ಪಾಲ್ಗೊಂಡಿದ್ದರು. 

ಮನೆ ಬಾಗಿಲಿಗೆ ಅಗತ್ಯ ಸಾಮಗ್ರಿ ಪೂರೈಕೆ 

ವ್ಯಕ್ತಿಯೊಬ್ಬರಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತುಂಬೆ ಗ್ರಾಮದ ಬಗ್ದಾದ್, ಮದಕ, ಉಜಿರೆಪಲ್ಲ, ಪೆರ್ಲಬೈಲ್, ಬೊಳ್ಳಾರಿ ಹಾಗೂ ನೇತ್ರಾವತಿ ನದಿ ತೀರದ ಪ್ರದೇಶವನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಈ ಪ್ರದೇಶಗಳ ಜನರು ಮನೆಯಿಂದ ಹೊರ ಬರುವಂತಿಲ್ಲ. ಈ ಹಿನ್ನೆಲೆಯಲ್ಲಿ ಯಾರಿಗಾದರೂ ದಿನಬಳಕೆಯ ಸಾಮಗ್ರಿಯ ಅಗತ್ಯ ಇದ್ದಲ್ಲಿ ಔಷಧ, ದಿನಸಿ, ಹಾಲು, ತರಕಾರಿ, ಕೋಳಿ ಮಾಂಸದ ಒಟ್ಟು 13 ಅಂಗಡಿಗಳ ಪಟ್ಟಿ ಮಾಡಲಾಗಿದ್ದು ಅಂಗಡಿ ಮಾಲಕರ ಮೊಬೈಲ್ ಸಂಖ್ಯೆಯನ್ನು ಕ್ವಾರಂಟೈನ್ ನಲ್ಲಿರುವ ಎಲ್ಲಾ ಮನೆಯವರಿಗೆ ಕೊಡಲಾಗಿದೆ. ಆ ಸಂಖ್ಯೆಗೆ ಕರೆ ಮಾಡಿದರೆ ಬೇಕಾದ ಸಾಮಗ್ರಿಗಳನ್ನು ಅಂಗಡಿಯವರೇ ಮನೆಗೆ ತಲುಪಿಸಲಿದ್ದಾರೆ.

ಸೋಂಕು ದೃಢಪಟ್ಟ ವ್ಯಕ್ತಿಯ ಪತ್ನಿ, ಮೂವರು ಮಕ್ಕಳನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಕುಟುಂಬ ಇದ್ದ ಮನೆಗೆ ಬೀಗ ಜಡಿಯಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News