ತಬ್ಲೀಗಿ ಜಮಾಅತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 8 ಮಲೇಶ್ಯನ್ನರು ವಿಮಾನನಿಲ್ದಾಣದಲ್ಲಿ ವಶಕ್ಕೆ

Update: 2020-04-05 18:18 GMT

ಹೊಸದಿಲ್ಲಿ, ಎ.5: ವಿಶೇಷ ವಿಮಾನದಲ್ಲಿ ಸ್ವದೇಶಕ್ಕೆ ತೆರಳಲು ಮುಂದಾಗಿದ್ದ ಮಲೇಶ್ಯದ 8 ಪ್ರಜೆಗಳನ್ನು ದಿಲ್ಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರವಿವಾರ ಬಂಧಿಸಲಾಗಿದೆ. ಇವರು ಕಳೆದ ತಿಂಗಳು ತಬ್ಲೀಗಿ ಜಮಾಅತ್ ನಡೆಸಿದ್ದ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತವಾಗಿದ್ದರೂ , ಭಾರತದಲ್ಲಿ ಸಿಕ್ಕಿಬಿದ್ದಿರುವ ತಮ್ಮ ಪ್ರಜೆಗಳನ್ನು ತೆರವುಗೊಳಿಸಲು ಕೆಲವು ರಾಷ್ಟ್ರಗಳು ವಿಶೇಷ ವಿಮಾನದ ವ್ಯವಸ್ಥೆ ಮಾಡಿವೆ.

ಮಲೇಶ್ಯಾ ಸರಕಾರ ವ್ಯವಸ್ಥೆ ಮಾಡಿದ್ದ ಮಲಿಂದೋ ಏರ್‌ವೇಸ್‌ನ ವಿಶೇಷ ವಿಮಾನ ರವಿವಾರ ದಿಲ್ಲಿ ವಿಮಾನನಿಲ್ದಾಣದಿಂದ ಹೊರಡುವ ಮಾಹಿತಿ ಪಡೆದ ಇವರು ವಿಮಾನದೊಳಗೆ ಪ್ರವೇಶಿಸುವ ಹಂತದಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ.

ಹೆಚ್ಚಿನ ವಿಚಾರಣೆಗೆ ದಿಲ್ಲಿ ಪೊಲೀಸರು ಹಾಗೂ ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗುವುದು. ತಬ್ಲೀಗಿ ಜಮಾಅತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಮೊಬೈಲ್ ಫೋನ್ ಡೇಟಾದ ಮೇಲೆ ಪೊಲೀಸರು ನಿಗಾ ಇರಿಸಿದ್ದರಿಂದ ಮಲೇಶ್ಯನ್ನರ ಬಗ್ಗೆ ಮಾಹಿತಿ ಲಭಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ತಬ್ಲೀಗಿ ಜಮಾಅತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 960 ವಿದೇಶಿಯರನ್ನು ಗೃಹ ಇಲಾಖೆ ಬ್ಲಾಕ್‌ ಲಿಸ್ಟ್‌ಗೆ ಸೇರಿಸಿದ್ದು ಇವರ ವೀಸಾವನ್ನು ರದ್ದುಪಡಿಸಲಾಗಿದೆ. ಪ್ರವಾಸಿ ವೀಸಾವನ್ನು ದುರುಪಯೋಗಪಡಿಸಿರುವ ಹಿನ್ನೆಲೆಯಲ್ಲಿ ಇವರ ವಿರುದ್ಧ ಫಾರಿನರ್ಸ್ ಆ್ಯಕ್ಟ್ (ವೀಸಾ ದುರುಪಯೋಗ)ನ 14ನೇ ಸೆಕ್ಷನ್‌ನಡಿ ಕಾನೂನು ಕ್ರಮ ಜರಗಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಲ್ಲದೆ, ವಿಪತ್ತು ನಿರ್ವಹಣಾ ಕಾಯ್ದೆಯಡಿಯೂ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News