ಪ್ರಥಮ ದರ್ಜೆ ಕ್ರಿಕೆಟ್‌ಗೆ ಸ್ಟೀವ್ ಓ’ಕೀಫೆ ವಿದಾಯ

Update: 2020-04-06 05:18 GMT

ಮೆಲ್ಬೋರ್ನ್, ಎ.5: ಆಸ್ಟ್ರೇಲಿಯದ ಶ್ರೇಷ್ಠ ಸ್ಪಿನ್ ಬೌಲರ್ ಸ್ಟೀವ್ ಓ’ಕೀಫೆ ರವಿವಾರ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತಿಯಾದರು. ಸೌತ್ ವೇಲ್ಸ್ ತಂಡ ಅವರನ್ನು ತಂಡದಲ್ಲಿ ಉಳಿಸಿಕೊಳ್ಳದ ಕಾರಣ ಈ ನಿರ್ಧಾರಕ್ಕೆ ಬಂದಿದ್ದಾರೆ. ಓ’ಕೀಫೆೆ 2017ರಲ್ಲಿ ಭಾರತ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 70 ರನ್ ನೀಡಿ 12 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು. ಇದು ಪ್ರವಾಸಿ ತಂಡದ ಸ್ಪಿನ್ನರ್ ನೀಡಿದ ಶ್ರೇಷ್ಠ ಪ್ರದರ್ಶನವಾಗಿ ಉಳಿದಿದೆ.

ಇತ್ತೀಚೆಗೆ ಶೀಫೀಲ್ಡ್ ಶೀಲ್ಡ್ ಋತುವಿನಲ್ಲಿ ಪ್ರಮುಖ ಸ್ಪಿನ್ನರ್‌ಗಳ ಪೈಕಿ ಒಬ್ಬರಾಗಿ ಹೊರಹೊಮ್ಮಿದ್ದ 35ರ ಹರೆಯದ ಓ’ಕೀಫೆ ಮತ್ತೊಮ್ಮೆ ಟೆಸ್ಟ್ ತಂಡಕ್ಕೆ ವಾಪಸಾಗುವ ನಿರೀಕ್ಷೆ ಮೂಡಿಸಿದ್ದರು. ‘‘ನನಗೆ ಗುತ್ತಿಗೆ ನೀಡಲಾಗಿಲ್ಲ ಎಂಬ ವಿಚಾರ ತಿಳಿದು ಬೇಸರವಾಗಿದೆ. ನಾನು ಈ ನಿರ್ಧಾರವನ್ನು ಗೌರವಿಸುವೆ ಹಾಗೂ ಸ್ವೀಕರಿಸುವೆ. ಹೀಗಾಗಿ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ’’ ಎಂದು ಎಡಗೈ ಸ್ಪಿನ್ನರ್ ಹೇಳಿಕೆಯೊಂದರಲ್ಲಿ ತಿಳಿಸಿದರು. ‘‘ತನ್ನ ದೇಶದ ಪರ ಆಡಿರುವುದು ಹಾಗೂ ತನ್ನ ರಾಜ್ಯ ತಂಡದ ನಾಯಕತ್ವವಹಿಸಿರುವುದು ತನಗೆ ಲಭಿಸಿರುವ ಗೌರವವಾಗಿತ್ತು. ಕ್ರಿಕೆಟ್ ಆಡುತ್ತಿದ್ದ ದಿನಗಳನ್ನು ನೆನಪಿಸಿಕೊಂಡರೆ ಏನೋ ಕಳೆದುಕೊಳ್ಳುತ್ತಿದ್ದೇನೆಂಬ ಭಾವನೆ ಮೂಡುತ್ತಿದೆ. ಟ್ವೆಂಟಿ-20 ಬಿಗ್‌ಬ್ಯಾಶ್ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ ತಂಡದ ಪರ ಆಡುವುದನ್ನು ಮುಂದುವರಿಸುತ್ತೇನೆ’’ ಎಂದು ಓ’ಕೀಫೆ ತಿಳಿಸಿದರು. 2007ರಲ್ಲಿ ಸ್ಪಿನ್ ದಿಗ್ಗಜ ಶೇನ್ ವಾರ್ನ್ ನಿವೃತ್ತಿಯಾದ ಬಳಿಕ ಅವರಿಂದ ತೆರವಾದ ಸ್ಥಾನ ತುಂಬಲು ಆಸ್ಟ್ರೇಲಿಯ ನಿಯೋಜಿಸಿರುವ 13 ಸ್ಪಿನ್ನರ್‌ಗಳ ಪೈಕಿ ಓ’ಕೀಫೆ ಕೂಡ ಒಬ್ಬರಾಗಿದ್ದರು. 2014ರಿಂದ 17ರ ತನಕ 9 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಓ’ಕೀಫೆ ಒಟ್ಟು 35 ವಿಕೆಟ್‌ಗಳನ್ನು ಕಬಳಿಸಿದರು.

ಓ’ಕೀಫೆ 2017ರಲ್ಲಿ ಪುಣೆಯಲ್ಲಿ ಭಾರತದ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯವೊಂದರಲ್ಲಿ 12 ವಿಕೆಟ್‌ಗಳನ್ನು ಉರುಳಿಸಿದ್ದರು. ಪ್ರತಿ ಇನಿಂಗ್ಸ್ ನಲ್ಲಿ ತಲಾ 6 ವಿಕೆಟ್‌ಗಳನ್ನು ಉರುಳಿಸಿ ಆಸ್ಟ್ರೇಲಿಯಕ್ಕೆ ಸುಲಭ ಗೆಲುವು ತಂದುಕೊಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News