ಎಎಫ್‌ಸಿ ಏಶ್ಯನ್ ಕಪ್ 2027ಕ್ಕೆ ಭಾರತ ಅಧಿಕೃತವಾಗಿ ಬಿಡ್ ಸಲ್ಲಿಕೆ

Update: 2020-04-06 10:07 GMT

ಹೊಸದಿಲ್ಲಿ, ಎ.5: ಎಎಫ್‌ಸಿ ಏಶ್ಯನ್ ಕಪ್ 2027ರ ಆತಿಥ್ಯವಹಿಸಲು ಭಾರತ ತನ್ನ ಎಲ್ಲ ಬಿಡ್ ದಾಖಲೆಗಳನ್ನು ಸಲ್ಲಿಸಿದೆ ಎಂದು ರಾಷ್ಟ್ರೀಯ ಒಕ್ಕೂಟದ ಅಧಿಕಾರಿಗಳು ರವಿವಾರ ದೃಢಪಡಿಸಿದ್ದಾರೆ.

ಒಂದು ವೇಳೆ ಭಾರತ ಬಿಡ್‌ನ್ನು ಗೆದ್ದುಕೊಂಡರೆ, ಮೊದಲ ಬಾರಿ ಕಾಂಟಿನೆಂಟಲ್ ಟೂರ್ನಿಯ ಆತಿಥ್ಯವಹಿಸಿಕೊಳ್ಳಲಿದೆ.

‘‘ನಾವು ಈಗಾಗಲೇ ಏಶ್ಯನ್ ಫುಟ್ಬಾಲ್ ಕಾನ್ಫಡರೇಶನ್‌ಗೆ(ಎಎಫ್‌ಸಿ)ನಮ್ಮ ಆಸಕ್ತಿಯ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಿದ್ದೇವೆ’’ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಪಿಟಿಐಗೆ ತಿಳಿಸಿದ್ದಾರೆ.

ಕೋವಿಡ್-19 ಸೋಂಕಿನ ಕಾರಣಕ್ಕೆ ಎಎಫ್‌ಸಿ ಇತ್ತೀಚೆಗೆ ಆಸಕ್ತಿಯ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಲು ಇದ್ದ ಮಾರ್ಚ್ 31ನೇ ಅಂತಿಮ ಗಡುವನ್ನು ಮೂರು ತಿಂಗಳು ಅರ್ಥಾತ್ ಜೂ.30ರ ತನಕ ವಿಸ್ತರಿಸಿತ್ತು. ‘‘ಆದಷ್ಟು ಬೇಗನೆ ಟೂರ್ನಮೆಂಟ್‌ನ ಆತಿಥ್ಯವಹಿಸುವ ದೇಶದ ಹೆಸರನ್ನು ಘೋಷಣೆಯಾಗುವ ವಿಶ್ವಾಸ ಎಎಫ್‌ಸಿಗಿದೆ. ಈ ಮೂಲಕ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಟೂರ್ನಿಯ ತಯಾರಿಗೆ ಹೆಚ್ಚಿ ನ ಸಮಯಾವಕಾಶ ಸಿಗುವ ಸಾಧ್ಯತೆಯಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ 2019ರ ಆವೃತ್ತಿಯ ಟೂರ್ನಿಯಲ್ಲಿ ತಂಡಗಳ ಸಂಖ್ಯೆ ಹೆಚ್ಚಿಸಲಾಗಿದ್ದು, ಇದರಲ್ಲಿ 24 ತಂಡಗಳು ಭಾಗವಹಿಸಿದ್ದವು’’ ಎಂದು ಎಎಫ್‌ಸಿ ತಿಳಿಸಿದೆ.

ಎಎಫ್‌ಸಿ ಮುಂದಿನ ವರ್ಷದ ಆರಂಭದಲ್ಲಿ ಆತಿಥೇಯ ರಾಷ್ಟ್ರದ ಹೆಸರು ಘೋಷಣೆಯಾಗುವ ನಿರೀಕ್ಷೆಯಲ್ಲಿದೆ.

ಭಾರತವಲ್ಲದೆ ಸೌದಿ ಅರೇಬಿಯ 2027ರ ಏಶ್ಯನ್ ಕಪ್‌ಗೆ ಬಿಡ್ ಸಲ್ಲಿಸುವುದಾಗಿ ಘೋಷಿಸಿದೆ. ಸೌದಿ ಮೂರು ಬಾರಿ ಎಎಫ್‌ಸಿ ಪ್ರಶಸ್ತಿಯನ್ನು ಎತ್ತಿಹಿಡಿದಿದೆ. ಆದರೆ, ಈ ತನಕ ಟೂರ್ನಿಯ ಆತಿಥ್ಯವನ್ನು ವಹಿಸಿಕೊಂಡಿಲ್ಲ. 2023ರ ಎಎಫ್‌ಸಿ ಏಶ್ಯನ್ ಕಪ್ ಆತಿಥ್ಯಕ್ಕಾಗಿ ಭಾರತವು ಥಾಯ್ಲೆಂಡ್, ಇಂಡೋನೇಶ್ಯ ಹಾಗೂ ದಕ್ಷಿಣ ಕೊರಿಯಾದ ಜತೆಗೆ ಬಿಡ್ ಸಲ್ಲಿಸಿತ್ತು. ಆದರೆ 2018ರ ಅಕ್ಟೋಬರ್‌ನ ಆರಂಭದಲ್ಲಿ ಬಿಡ್‌ನಿಂದ ಹಿಂದೆ ಸರಿದಿತ್ತು. ಆ ನಂತರ ಥಾಯ್ಲೆಂಡ್ ಹಾಗೂ ದಕ್ಷಿಣ ಕೊರಿಯಾ ಕೂಡ ಹೊರ ನಡೆದವು. ಅಂತಿಮವಾಗಿ 2023ರ ಟೂರ್ನಮೆಂಟ್‌ನ ಆತಿಥ್ಯದ ಹಕ್ಕು ಚೀನಾದ ಪಾಲಾಗಿತ್ತು.

2023ರ ಮಹಿಳಾ ವಿಶ್ವಕಪ್‌ನ ಆತಿಥ್ಯವಹಿಸಿರುವ ದಕ್ಷಿಣ ಕೊರಿಯಾ ಪುರುಷರ 2027ರ ಎಎಫ್‌ಸಿ ಏಶ್ಯನ್ ಕಪ್ ಬಿಡ್ ಸಲ್ಲಿಸಿರುವ ಭಾರತದ ಹಾದಿ ಅನುಸರಿಸುವ ಸಾಧ್ಯತೆಯಿದೆ. ಚೀನಾ 2023ರ ಎಎಫ್‌ಸಿ ಕಪ್‌ನ್ನು 10 ನಗರಗಳಲ್ಲಿ ಆಯೋಜಿಸಲಿದೆ.

2017ರಲ್ಲಿ ಪುರುಷರ ಅಂಡರ್-17 ವಿಶ್ವಕಪ್‌ನ್ನು ಯಶಸ್ವಿಯಾಗಿ ಸಂಘಟಿಸಿದ್ದ ಭಾರತ ಈ ವರ್ಷದ ನವೆಂಬರ್‌ನಲ್ಲಿ ಅಂಡರ್-17 ಮಹಿಳಾ ವಿಶ್ವಕಪ್‌ನ ಆತಿಥ್ಯವಹಿಸಲು ಸಕಲ ರೀತಿಯಲ್ಲಿ ಸಜ್ಜಾಗಿತ್ತು. ಆದರೆ, ಕೋವಿಡ್-19ರ ಅಬ್ಬರದಿಂದಾಗಿ ಟೂರ್ನಿಯನ್ನು ಮುಂದೂಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News