ಕೊರೋನ ಭೀತಿಯ ನಡುವೆ ಸೆಖೆಯ ಕಾಟ!
ಮಂಗಳೂರು, ಎ.6: ಕೊರೋನ ಭೀತಿಯ ನಡುವೆಯೇ ದಿನೇ ದಿನೇ ಏರಿಕೆಯಾಗುತ್ತಿರುವ ತಾಪಮಾನವೂ ಜನಸಾಮಾನ್ಯರನ್ನು ಕಾಡುತ್ತಿದೆ. ಲಾಕ್‌ಡೌನ್‌ನಿಂದಾಗಿ ಮುಂದಿನ ಆರ್ಥಿಕ ಪರಿಸ್ಥಿತಿಯಿಂದಾಗಿ ಬದುಕು ಕಟ್ಟಿಕೊಳ್ಳುವ ಚಿಂತೆಯ ಜತೆಗೆ ಮನೆಯ ಒಳಗಡೆ ಬಿಸಿಲಿನ ತಾಪವನ್ನು ಸಹಿಸಲಾಗದೆ ಚಡಪಡಿಸುವಂತಾಗಿದೆ.
ಬೆಳಗ್ಗೆ 8 ಗಂಟೆಯ ಹೊತ್ತಿಗಾಗಲೇ ಸೂರ್ಯನ ಶಾಖ ಬಿಸಿಯಾಗಲು ಆರಂಭವಾಗುತ್ತಿದ್ದು, ಮಧ್ಯಾಹ್ನ 11 ಗಂಟೆಯ ಹೊತ್ತಿಗೆ ಸುಡು ಬಿಸಿಲು ಮನೆಯಿಂದ ಹೊರಗಡಿಯಿಟ್ಟರೆ ಕಾಲಿನ ಪಾದದ ಜತೆಗೆ ಮೈ ಚರ್ಮವನ್ನೇ ಸುಡುವ ಅನುಭವವಾಗುತ್ತದೆ. ಸದ್ಯ ಲಾಕ್‌ಡೌನ್‌ನಿಂದಾಗಿ ಜನರು ಮನೆಗಳಲ್ಲೇ ಇರುವುದರಿಂದ ಬಹುತೇಕವಾಗಿ ತಾರಸಿ ಮನೆಯೊಳಗಡೆ ಬಿಸಿಲ ಬೇಗೆ ತಡೆಯಲಾಗದೆ ಒದ್ದಾಡುವಂತಾಗಿದೆ. ಕೆಲಸಕ್ಕೆಂದು ಹೊರ ಹೋಗುತ್ತಿದ್ದವರಿಗೆ ಕಚೇರಿಗಳಲ್ಲಿ ಅಥವಾ ಮಾಲ್‌ನಂತಹ ಬೃಹತ್ ಕಟ್ಟಡಗಳಲ್ಲಿ ಎಸಿ ವ್ಯವಸ್ಥೆ ಇರುವ ಕಾರಣ ಬಿಸಿಲ ಬೇಗೆ ಅಷ್ಟಾಗಿ ಕಾಡುತ್ತಿರಲಿಲ್ಲ. ಆದರೆ ಇದೀಗ ಮನೆಗಳಲ್ಲಿ ಫ್ಯಾನ್ ಇದ್ದರೂ, ಉರಿ ಬಿಸಿಲಿಗೆ ಅದರ ಗಾಳಿ ಸಾಕಾಗುತ್ತಿಲ್ಲ. ಅದರ ಜತೆಯಲ್ಲೇ ಹೆಚ್ಚು ಹೊತ್ತು ಫ್ಯಾನ್ ಹಾಕಿದರೆ ವಿದ್ಯುತ್ ದರ ಹೆಚ್ಚು ಬರುವ ಆತಂಕ. ಒಟ್ಟಿನಲ್ಲಿ, ಕೊರೋನ ಭೀತಿಯ ಜತೆಯಲ್ಲೇ ಜನಸಾಮಾನ್ಯರು ಬಿಸಿಲ ಬೇಗೆಯಿಂದಲೂ ಕಂಗಾಲಾಗಿದ್ದಾರೆ.
ಮನೆಗಳಲ್ಲಿ ಮೈ ತಣಿಸುವ ಪಾನೀಯಗಳಿಗೆ ಬೇಡಿಕೆ!
ದ.ಕ. ಜಿಲ್ಲೆಯಲ್ಲಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ದಿನಸಿ ಸಾಮಗ್ರಿಗಳ ಖರೀದಿಗೆ ಅವಕಾಶವಿದೆ. ಆದರೆ, ಎಳನೀರು, ಕಲ್ಲಂಗಡಿಯಂತಹ ಜ್ಯೂಸ್‌ಗಳನ್ನು ಮನೆಯವರು ಹೊರ ಹೋಗಿ ಕುಡಿಯಲು ಸಾಧ್ಯವಾಗುತ್ತಿಲ್ಲ. ಇದೇ ವೇಳೆ ಹಣ್ಣು ಹಂಪಲುಗಳು ದುಬಾರಿಯಾಗಿದ್ದು, ಲಭ್ಯತೆಯೂ ಸ್ಥಳೀಯವಾಗಿ ಸಾಕಷ್ಟು ಕಡಿಮೆಯಾಗಿದೆ. ಹಾಗಾಗಿ ಮನೆಗಳಲ್ಲಿ ನೀರು ಮತ್ತು ಲಭ್ಯವಿರುವ ನಿಂಬು, ಜೀರಿಗೆ ಅಥವಾ ಇನ್ನಿತರ ದೇಹಕ್ಕೆ ತಂಪೊದಗಿಸುವ ಸಾಮಗ್ರಿಗಳನ್ನು ಬಳಸಿಕೊಂಡು ಪಾನೀಯಗಳನ್ನು ಮಾಡಿ ಕುಡಿಯುವಂತಾಗಿದೆ.
10 ಗಂಟೆಯ ಬಳಿಕ ಜನರೇ ವಿರಳ!
ಸದ್ಯ ಬೆಳಗ್ಗೆ 7ರಿಂದ 12ರವರೆಗೆ ಮಾತ್ರ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಆದರೆ ಜನ ಬೆಳಗ್ಗಿನ ಹೊತ್ತಿನಲ್ಲೇ ಅಂದರೆ 7ರಿಂದ 10 ಗಂಟೆಯೊಳಗೆ ತಮ್ಮ ಖರೀದಿಯನ್ನು ಮುಗಿಸಿ ವಾಪಸ್ ಮನೆ ಸೇರಿಕೊಳ್ಳುತ್ತಿದ್ದಾರೆ.
ಸಮಯವೇ ಕಳೆಯುತ್ತಿಲ್ಲ ಎಂಬ ಕೊರಗು!
ಮನೆಯೊಳಗಿದ್ದುಕೊಂಡು ಸಮಯವೇ ಕಳೆಯುತ್ತಿಲ್ಲ ಎಂಬ ಕೊರಗು ಒಂದೆಡೆಯಾದರೆ, ಈ ಲಾಕ್‌ಡೌನ್ ಎ.14ಕ್ಕೆ ಮುಗಿಯುವುದೇ ಎಂಬ ಪ್ರಶ್ನೆಯೂ ಕೆಲವರನ್ನು ಕಾಡುತ್ತಿದೆ. ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮುಂದುವರಿಯಲಿದೆ ಎಂಬ ಆತಂಕದ ಜತೆಗೆ, ಕೆಲಸವೂ ಇಲ್ಲದೆ, ಕೈಯಲ್ಲಿ ಹಣವೂ ಇಲ್ಲದೆ, ಮುಂದೆ ಜೀವನ ಹೇಗೆ ಎಂಬ ಪ್ರಶ್ನೆ ಬಹುತೇಕರದ್ದು. ಕೆಲ ಮನೆಗಳಲ್ಲಿ ಶಾಲಾ ಕಾಲೇಜು ಮಕ್ಕಳು ಟಿವಿ ವೀಕ್ಷಣೆ, ಮೊಬೈಲ್ ಫೋನ್‌ನಲ್ಲಿ ಸಮಯ ಕಳೆಯುತ್ತಿದ್ದರೆ ಇನ್ನು ಕೆಲ ಹೊತ್ತು ಲೂಡೋ, ಕೇರಂ, ಇಸ್ಪೀಟ್‌ನಂತಹ ಆಟಗಳ ಮೂಲಕ ಪೋಷಕರ ಜತೆ ಕಾಲ ಕಳೆಯುತ್ತಿದ್ದಾರೆ. ಇದರ ನಡುವೆ, ದಿನಕೂಲಿ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರ ಪರದಾಟ ಮಾತ್ರ ಹೇಳತೀರದು.
ಮಂಗಳೂರು ನಗರದಲ್ಲಿ ಸೋಮವಾರ ಕೂಡಾ ದಿನಸಿ ಸಾಮಗ್ರಿಗಳ ಖರೀದಿ ಅವಧಿಯಲ್ಲಿ ಜನರ ಸಂಚಾರ ಅತೀ ವಿರಳವಾಗಿತ್ತು. ನಗರದ ಹೈಪರ್, ಸೂಪರ್ ಸೇರಿದಂತೆ ಮಾರುಕಟ್ಟೆಗಳು, ಅಂಗಡಿಗಳು ತೆರೆದಿದ್ದರೂ ಗ್ರಾಹಕರ ಸಂಖ್ಯೆ ಅತೀ ಕಡಿಮೆಯಾಗಿತ್ತು. ಕೆಲವೊಂದು ಆಟೋ ರಿಕ್ಷಾಗಳು, ದ್ವಿಚಕ್ರ ಹಾಗೂ ಕಾರುಗಳ ಸಂಚಾರ ಮಾತ್ರ ಬೆಳಗ್ಗಿನ ಹೊತ್ತು ಕಂಡು ಬಂತು.