ಅಂಗರಗುಂಡಿ: ವಲಸೆ ಕಾರ್ಮಿಕರಿಗೆ ನಿತ್ಯ ಅನ್ನದಾನ
ಮಂಗಳೂರು, ಎ. 6: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾಗಿರುವ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ದುಡಿಯುತ್ತಿದ್ದ ಮತ್ತು ಸಮೀಪದ ಅಂಗರಗುಂಡಿ ಪ್ರದೇಶದಲ್ಲಿ ನೆಲೆಸಿರುವ ರಾಜ್ಯದ ವಿವಿಧ ಜಿಲ್ಲೆಗಳ ಹಾಗೂ ಹೊರ ರಾಜ್ಯದ ಕಾರ್ಮಿಕರಿಗೆ ‘ಇಂಚರ ಫೌಂಡೇಶನ್ ಮಂಗಳೂರು’ ಸಂಸ್ಥೆಯ ವತಿಯಿಂದ ಪ್ರತೀ ದಿನ ಎರಡು ಹೊತ್ತಿನ ಊಟ ಸರಬರಾಜು ಮಾಡಲಾಗುತ್ತಿದೆ.
ಊರಿಗೆ ತೆರಳಲೂ ಆಗದೆ, ದುಡಿಯಲೂ ಸಾಧ್ಯವಿಲ್ಲದೆ ಅತಂತ್ರರಾಗಿರುವ ಸುಮಾರು 400ರಷ್ಟು ಮಂದಿಗೆ ಅಂಗರಗುಂಡಿ ಪ್ರದೇಶದಲ್ಲಿ ಊಟ ತಯಾರಿಸಿ ಎರಡು ಹೊತ್ತಿನಲ್ಲಿ ಮನೆ ಬಾಗಿಲಿಗೆ ತೆರಳಿ ವಿತರಿಸಲಾಗುತ್ತಿದೆ. ಇದಕ್ಕಾಗಿ ಇಂಚರ ಫೌಂಡೇಶನ್ ಧನ ಸಹಾಯ ನೀಡುತ್ತಿದ್ದು, ಸಂಸ್ಥೆಯ ಸ್ಥಳೀಯ ಕಾರ್ಯಕರ್ತ ಮೂಲಕ ಊಟ ನೀಡಲಾಗುತ್ತಿದೆ. ಇದುವರೆಗೆ ಸುಮಾರು 1 ಲಕ್ಷರೂ.ಗಳಷ್ಟು ವೆಚ್ಚ ಮಾಡಲಾಗಿದೆ. ಲಾಕ್‌ಡೌನ್ ಮುಗಿಯುವವರೆಗೆ ಊಟ ಸರಬರಾಜು ಮುಂದುವರಿಯಲಿದೆ ಎಂದು ಇಂಚರ ಫೌಂಡೇಶನ್ ಮುಖ್ಯಸ್ಥ ಪ್ರೀತಂ ರಾಡ್ರಿಗಸ್ ತಿಳಿಸಿದ್ದಾರೆ.
ಅಲ್ಲದೆ ಹೊರ ಪ್ರದೇಶಗಳಿಂದ ಬಂದು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಬಾಕಿಯಾಗಿರುವ ಟ್ರಕ್, ಲಾರಿ ಚಾಲಕರಿಗೂ ನಿತ್ಯ ಊಟ ನೀಡಲಾಗುತ್ತಿದೆ. ಸಂಸ್ಥೆಯು ಸಾಮಾಜಿಕ ಜವಾಬ್ದಾರಿಯಡಿ ಈ ಸೇವೆ ಮಾಡುತ್ತಿದೆ. ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸುವ ಯೋಚನೆ ಇದೆ ಎಂದು ರಾಡ್ರಿಗಸ್ ತಿಳಿಸಿದ್ದಾರೆ.