ಪಟ್ರಮೆ ನಿವಾಸಿಗಳಿಗೆ ಆಹಾರ ಕಿಟ್ ವಿತರಣೆಗೆ ಅಡ್ಡಿ ಪ್ರಕರಣ: ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ
ಮಂಗಳೂರು, ಎ. 6: ಮನುವಾದಿ ಧೋರಣೆಯಿಂದ ಪ್ರೇರೇಪಿತವಾದ ಸಂಘಪರಿವಾರಗಳಿಗೆ ದಲಿತರನ್ನು ತುಳಿಯುವುದು ಮಾತ್ರ ಗುರಿಯಾಗಿದೆ. ಅವರಿಗೆ ದಲಿತರ ಏಳಿಗೆಯನ್ನು ಸಹಿಸಲಾಗುತ್ತಿಲ್ಲ, ಇಂತಹ ಸಂವಿಧಾನ ವಿರೋಧಿ ಮತ್ತು ದೇಶ ವಿರೋಧಿ, ಮನುಕುಲ ವಿರೋಧಿ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ದಲಿತ ಹಕ್ಕು ಸಮಿತಿಯ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಬಾಬು ಕೊಯ್ಯೂರು, ಕಾರ್ಯದರ್ಶಿ ಈಶ್ವರಿ ಪದ್ಮುಂಜ, ಮುಖಂಡರಾದ ಕೃಷ್ಣಪ್ಪ ಕಲ್ಲಾಜೆ, ಪಟ್ರಮೆಯ ರಮೇಶ್, ಚೋಮ ಪತ್ರಿಕಾ ಹೇಳಿಕೆಯಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಪಟ್ರಮೆ ಗ್ರಾಮದಲ್ಲಿ ಬಡ ದಲಿತರಿಗೆ ಆಹಾರ ಸಾಮಗ್ರಿಗಳನ್ನು ಮಂಗಳೂರಿನ ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ವತಿಯಿಂದ ವಿತರಿಸುವುದಕ್ಕೆ ತಡೆಯೊಡ್ಡಿ ದಲಿತರಿಗೆ ಅನ್ಯಾಯ ಹಾಗೂ ದಾನಿಗಳು ಮುಸ್ಲಿಮರು ಎಂಬ ಕಾರಣ ನೀಡಿ ದಾನಿಗಳಿಗೆ ಅವಮಾನ ಮಾಡಿದ ಸಂಘಪರಿವಾರದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮದ ಅಗತ್ಯವಿದೆ. ಜಿಲ್ಲಾದ್ಯಂತ ಆಹಾರ ವಸ್ತುಗಳ ವಿತರಣೆಗೆ ಅನುಮತಿ ಪಡೆದಿರುವ ಸಂಸ್ಥೆಯು ಕೊರೋನ ಲಾಕ್‌ಡೌನ್ ಸಮಸ್ಯೆಯಿಂದ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ಬಡವರಿಗೆ ವಿತರಣೆ ಮಾಡಲು ಪಟ್ರಮೆ ಗ್ರಾಪಂ ಅನುಮತಿ ಪಡೆದು ಬಂದವರನ್ನು ತಡೆದು ಬಡ ದಲಿತರ ಅನ್ನದ ಬಟ್ಟಲಿಗೆ ಕಲ್ಲು ಹಾಕಿದ ಪಟ್ರಮೆಯ ವೀರ ಕೇಸರಿ ತಂಡದ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದ್ದಾರೆ.
ಪೊಲೀಸ್ ಇಲಾಖೆ ಕೂಡಾ ದಲಿತರ ವಿರೋಧವಾಗಿ ನಡೆದು ದಲಿತರಿಗೆ ಅಕ್ಕಿ ವಿತರಣೆ ಮಾಡಲು ಜಿಲ್ಲಾ ಮಟ್ಟದ ಅನುಮತಿ ಇರುವ ದಾನಿಗಳನ್ನೇ ತಪ್ಪೆಂದು ಪರಿಗಣಿಸಿರುವುದು ಸರಕಾರದ ಧೋರಣೆಗೆ ಕೈಗನ್ನಡಿಯಾಗಿದೆ. ಸರಕಾರದ ಕೆಲವು ತಪ್ಪುನೀತಿಗಳಿಂದ ಕೆಲವು ಬಡ ಕುಟುಂಬಗಳಿಗೆ ರೇಶನ್ ಕಾರ್ಡು ಆಗುತ್ತಿಲ್ಲ. ಭಾರತದ ಮೂಲ ನಿವಾಸಿಗಳಾದ ದಲಿತರಿಗೆ ಒಂದಿಂಚು ಭೂಮಿಯ ಹಕ್ಕು ನೀಡದೆ ಮನೆ ನಂಬ್ರವೂ ಆಗಿರುವುದಿಲ್ಲ. ಅವರು ವಾಸಿಸುವ ಭೂಮಿ ಅರಣ್ಯಕ್ಕೆ ಸೇರಿದ್ದೆಂದು ಭೂಮಿಯ ಹಕ್ಕಿನಿಂದ ವಂಚಿಸಿ ನಿರ್ಗತಿಕರನ್ನಾಗಿಸಿ ರೇಶನ್ ಕಾರ್ಡು ನೀಡಲು ಸಾಧ್ಯವಿಲ್ಲ ಎನ್ನುವ ಸರಕಾರದ ಧೋಣೆಯನ್ನು ಕೂಡ ಖಂಡಿಸುತ್ತೇವೆ. ಕೊರೋನ ತಡೆಯಲು ಲಾಕ್‌ಡೌನ್ ಮಾಡಿರುವುದು ಸರಿಯಾದ ಕ್ರಮವಾಗಿದೆ. ಆದರೆ ದಿನಾ ಕೂಲಿ ಮಾಡಿ ಬದುಕುವವರಿಗೆ ಕೆಲಸವೂ ಇಲ್ಲದೆ ಆಹಾರ ವಸ್ತುಗಳನ್ನು ವಿತರಿಸಲು ಸರಕಾರ ವಿಫಲವಾಗಿರುವಾಗ ದಾನಿಗಳು ನೀಡುವುದನ್ನೂ ತಡೆಯುವ ಈ ಸಂಘ ಪರಿವಾರಗಳ ದಲಿತ ವಿರೋಧಿ ನೀತಿಯ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ದಲಿತ ಮುಖಂಡರು ಹೇಳಿಕೆಯಲ್ಲಿ ತಿಳಿಸಿದ್ದಾರೆ.