ವೆನ್ಲಾಕ್ ಆಸ್ಪತ್ರೆಯ ಹೊಸ ಬ್ಲಾಕ್ ಕೊರೋನ ಚಿಕಿತ್ಸೆಗೆ ಸಿದ್ಧ : ವೈದ್ಯಾಧಿಕಾರಿ

Update: 2020-04-06 14:16 GMT

ಮಂಗಳೂರು, ಎ.6: ವೆನ್ಲಾಕ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಬ್ಲಾಕ್ ಕೊರೋನ ಶಂಕಿತ ಹಾಗೂ ಸೋಂಕಿತರ ತಪಾಸಣೆಗೆ ಸಜ್ಜುಗೊಂಡಿದ್ದು, ಇಂದು ವೈದ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಆಸ್ಪತ್ರೆಗೆ ಬರುವ ಶಂಕಿತ ಅಥವಾ ಸೋಂಕಿತ ರೋಗಿಗಳನ್ನು ಯಾವ ರೀತಿಯಲ್ಲಿ ಉಪಚರಿಸ ಲಾಗುತ್ತದೆ ಎಂಬ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು.

ವೆನ್ಲಾಕ್ ನ ಕೃತಕ ಅವಯವ ಕೇಂದ್ರ ಬಳಿ (ಮಸೀದಿ ಎದುರು)ಯ ಸೂಪರ್ ಸ್ಪೆಷಾಲಿಟಿ ಬ್ಲಾಕನ್ನು ಸಂಪೂರ್ಣವಾಗಿ ಕೋವಿಡ್ ಬ್ಲಾಕ್ ಆಗಿ ಪರಿವರ್ತಿಸಲಾಗಿದೆ. ಸದ್ಯ ಸೋಂಕಿತರು ಹಾಗೂ ಶಂಕಿತ ರೋಗಿಗಳು ಆಸ್ಪತ್ರೆಯ ಆಯುಷ್ ಬ್ಲಾಕ್‌ನಲ್ಲಿ ನಿಗಾದಲ್ಲಿದ್ದಾರೆ.

ಸೂಪರ್ ಸ್ಪೆಷಾಲಿಟಿ ಬ್ಲಾಕ್‌ನ ನೂತನ ಕೋವಿಡ್ ಬ್ಲಾಕ್‌ನ 3ನೆ ಮಹಡಿಯನ್ನು ಸಂಪೂರ್ಣವಾಗಿ ಕೊರೋನ ಶಂಕಿತ ರೋಗಿಗಳಿಗೆ ಮೀಸಲಿರಿಸಲಾಗಿದೆ. ಇಲ್ಲಿ ನಾಲ್ಕು ವಿಭಾಗಗಳಲ್ಲಿ ಒಟ್ಟು 79 ಹಾಸಿಗೆಗಳಿವೆ. ಪ್ರತಿ ವಿಭಾಗದಲ್ಲೂ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ಸಿಬ್ಬಂದಿಗೆ ಡಾನ್ನಿಂಗ್ ಹಾಗೂ ಡಾಪ್ಪಿಂಗ್ ರೂಂ (ರೋಗಿಯ ಬಳಿ ತೆರಳುವಾಗ ಹಾಕಬೇಕಾದ ಉಡುಪುಗಳನ್ನು ಹಾಕಿಕೊಳ್ಳಲು ಹಾಗೂ ತೆಗೆಯಲು ಪ್ರತ್ಯೇಕವಾದ ಕೊಠಡಿ)ಗಳಿವೆ. ಜತೆಯಲ್ಲೇ ಶಂಕಿತ ರೋಗಿಯ ಗಂಟಲ ದ್ರವ ಸಂಗ್ರಹಕ್ಕೂ ಪ್ರತ್ಯೇಕ ಸುಸಜ್ಜಿತ ಕೊಠಡಿ ಇದೆ. ಶಂಕಿತ ರೋಗಿಗಳು ವರದಿ ಪಾಸಿಟಿವ್ ಬಂದಲ್ಲಿ ಅವರನ್ನು 2ನೆ ಮಹಡಿಯಲ್ಲಿರುವ ಪಾಸಿಟಿವ್ ರೋಗಿಗಳ ವಿಭಾಗಕ್ಕೆ ಸ್ಥಳಾಂತರಿಸಲಾಗುತ್ತದೆ. ಅಲ್ಲಿ ಒಟ್ಟು 99 ಹಾಸಿಗೆಗಳಿವೆ. ಇನ್ನು ಈ ಸೋಂಕಿತರಲ್ಲಿ ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಗಳನ್ನು 1ನೆ ಮಹಡಿಗೆ ಸ್ಥಳಾಂತರಿಸಲಾಗುತ್ತದೆ. ಅಲ್ಲಿ 49 ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ದ್ವಿತೀಯ ಮತ್ತು ತೃತೀಯ ಮಹಡಿ (ಶಂಕಿತರು ಹಾಗೂ ಪಾಸಿಟಿವ್ ರೋಗಿಗಳನ್ನು ಇರಿಸಲಾಗಿರುವ ವಿಭಾಗ)ಗಳಿಗೆ ತೆರಳಬೇಕಾದರೆ ಪ್ರತ್ಯೇಕ ಲಿಫ್ಟ್‌ಗಳನ್ನು ಮೀಸಲಿಡಲಾಗಿದೆ.

ವೆನ್ಲಾಕ್ ಆಸ್ಪತ್ರೆಯಲ್ಲಿ ಕೆಎಂಸಿಯ 50 ಮಂದಿ, ಎನ್‌ಎಚ್‌ಎಂನ 44 ಹಾಗೂ 136 ಸರಕಾರಿ ದಾದಿಯರು ಕರ್ತವ್ಯದಲ್ಲಿದ್ದು, ಅವರೆಲ್ಲರ ಸೇವೆಯನ್ನು ಕೊರೋನ ರೋಗಿಗಳ ಚಿಕಿತ್ಸೆಗೆ ಪಡೆಯಲಾಗುತ್ತದೆ ಎಂದು ಆಸ್ಪತ್ರೆಯ ಹಿರಿಯ ದಾದಿಯೊಬ್ಬರು ಮಾಹಿತಿ ನೀಡಿದರು.

ಆಸ್ಪತ್ರೆಯ ಹೊರ ಆವರಣದಲ್ಲಿ ಶಾಮಿಯಾನ ಹಾಕಿ ಶಂಕಿತ ಅಥವಾ ಸೋಂಕಿತರು ಬಂದಾಗ ಅವರು ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿತುಕೊಳ್ಳಲು ಆಸನಗಳನ್ನು ಹಾಕಲಾಗಿದೆ. ಆಸ್ಪತ್ರೆಯ ಆವರಣಕ್ಕೆ ಪ್ರವೇಶಿಸುವ ರೋಗಿಗೆ ಸ್ಯಾನಿಟೈಸರ್ ನೀಡಲಾಗುತ್ತದೆ. ಅಲ್ಲಿ ಮಾಸ್ಕ್ ಕೂಡಾ ಒದಗಿಸಲಾಗುತ್ತದೆ. ಬಳಿಕ ನೋಂದಣಿ ಕಚೇರಿಯಲ್ಲಿ ಆತನ ಸಂಪೂರ್ಣ ವಿವರವನ್ನು ಪಡೆಯಲಾಗುತ್ತದೆ. ಅಲ್ಲಿಂದ ಆತನಿಗೆ ವೇಯ್ಟಿಂಗ್ ಏರಿಯಾದಲ್ಲಿ ಕುಳ್ಳಿರಿಸಲಾಗುತ್ತದೆ. ಬಳಿಕ ಆಸ್ಪತ್ರೆಯ ಒಳಗಿನಿಂದ ಸಹಾಯಕರು ಬಂದು ರೋಗಿಯನ್ನು ಆತನ ವಿವರಗಳುಳ್ಳ ದಾಖಲಾತಿಯೊಂದಿಗೆ ಆತನನ್ನು ಆಸ್ಪತ್ರೆಯ ಒಳಗಿನ ಪ್ರತ್ಯೇಕ ಫ್ಲೂ ಕ್ಲಿನಿಕ್‌ಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ರೋಗಿಯನ್ನು ಸ್ಕ್ರೀನಿಂಗ್‌ ಗೊಳಪಡಿಸಿ 3ನೆ ಮಹಡಿಗೆ ಕೊಂಡೊಯ್ಯಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯರಿ ಪ್ರತ್ಯಕ್ಷಿಕೆಯೊಂದಿಗೆ ವಿವರ ನೀಡಿದರು.

ದ.ಕ. ಜಿಲ್ಲೆಯಲ್ಲಿ 12 ಸೋಂಕಿತ ರೋಗಿಗಳಲ್ಲಿ ಈಗಾಗಲೇ 4 ಮಂದಿ ಇಂದು ಗುಣಮುಖರಾಗಿ ಬಿಡುಗಡೆಯಾಗಿದ್ದು, ಉಳಿದ 8 ಮಂದಿ ಸೋಂಕಿತರಲ್ಲಿ ಆರು ಮಂದಿ ಆಸ್ಪತ್ರೆಯ ಆಯುಷ್ ವಿಭಾಗದಲ್ಲಿದ್ದಾರೆ. ಉಳಿದಿಬ್ಬರು ರೋಗಿಗಳು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೆನ್ಲಾಕ್ ಸುಪರಿಂಟೆಂಡೆಂಟ್ ಡಾ. ಸದಾಶಿವ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News