ತಬ್ಲೀಗಿ ಯುವಕ ವೈದ್ಯರ ಮೇಲೆ ಉಗುಳಿಲ್ಲ, ಕೆಟ್ಟದಾಗಿ ವರ್ತಿಸಿಲ್ಲ: ರಾಯ್ಪುರ ಏಮ್ಸ್ ಆಸ್ಪತ್ರೆ

Update: 2020-04-06 14:21 GMT

ರಾಯ್ಪುರ, ಎ.6: ತಬ್ಲೀಗ್ ಜಮಾಅತ್ ಗೆ ಸೇರಿದ ಯುವಕನೊಬ್ಬ ಇಲ್ಲಿನ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಜೊತೆಗೆ ಅನುಚಿತವಾಗಿ ವರ್ತಿಸಿ ಅವರ ಮೇಲೆ ಉಗುಳಿದ್ದಾನೆ ಎಂಬ ವದಂತಿ ಸುದ್ದಿಯಾಗಿ ವ್ಯಾಪಕವಾಗಿ ಹರಡಿದ ಬೆನ್ನಿಗೇ ನಗರದ ಆಲ್ ಇಂಡಿಯಾ ಮೆಡಿಕಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIMMS) ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.

ತಬ್ಲೀಗ್ ಜಮಾಅತ್ ನ ಯುವಕನನ್ನು ಇಲ್ಲಿನ ಆಸ್ಪತ್ರೆಗೆ ದಾಖಲು ಮಾಡಿದ ಕೂಡಲೇ ಆತ ಅಲ್ಲಿ ರಂಪಾಟ ನಡೆಸಿದ ಎಂದು ರಾಯ್ಪುರ ಸಂಸದ ಸುನಿಲ್ ಸೋನಿ ಆರೋಪಿಸಿದ್ದರು. ಅದರ ಬೆನ್ನಿಗೇ ಪ್ರಾದೇಶಿಕ ಟಿವಿ ಚಾನೆಲ್ ಒಂದು ಈ ಸುದ್ದಿಯನ್ನು ಪ್ರಸಾರ ಮಾಡಿತ್ತು. ಆದರೆ ಇದು ಸುಳ್ಳು ಸುದ್ದಿ ಎಂದು ಛತ್ತೀಸ್ ಗಡ ಸರಕಾರದ ಸುಳ್ಳು ಸುದ್ದಿ ನಿಗ್ರಹ ಹಾಗೂ ವಿಶೇಷ ನಿಗಾ ಘಟಕ ಹೇಳಿತ್ತು.

ಇದೀಗ ಹೇಳಿಕೆ ಬಿಡುಗಡೆ ಮಾಡಿರುವ ಏಮ್ಸ್ (AIMMS) ಆಸ್ಪತ್ರೆ "ಕೋರ್ಬಾ ಜಿಲ್ಲೆಯಿಂದ ಬಂದು ದಾಖಲಾಗಿದ್ದ ಅಪ್ರಾಪ್ತ ವಯಸ್ಕ ಕೊರೋನ ಪಾಸಿಟಿವ್ ಬಾಲಕ ಡಾಕ್ಟರ್ ಗಳ ಮೇಲೆ ಅಥವಾ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಉಗುಳಿಲ್ಲ. ಕೊರೋನ ಪಾಸಿಟಿವ್ ವ್ಯಕ್ತಿಗಳು ತೆಗೆದುಕೊಳ್ಳಬೇಕಾದ ಔಷಧಿಗಳನ್ನು ತೆಗೆದುಕೊಂಡು ಆಸ್ಪತ್ರೆಯ ಸಿಬ್ಬಂದಿ ಜೊತೆ ಸಹಕರಿಸುತ್ತಿದ್ದಾನೆ. ಐಸೋಲೇಸನ್ ವಾರ್ಡ್ ನ ಎಲ್ಲಾ ನಿಯಮಗಳನ್ನು ಪಾಲಿಸುತ್ತಿದ್ದಾನೆ" ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News