ಉಡುಪಿಯಲ್ಲೇ 4,700 ಲೀಟರ್ ಸ್ಯಾನಿಟೈಸರ್ ಉತ್ಪಾದನೆ : ಅಬಕಾರಿ ಇಲಾಖೆ

Update: 2020-04-06 14:46 GMT
ಸ್ಯಾನಿಟೈಸರ್

ಉಡುಪಿ, ಎ.6: ಕೊರೋನ ಭೀತಿಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ತಲೆದೋರಿರುವ ಸ್ಯಾನಿಟೈಸರ್ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಅಬಕಾರಿ ಇಲಾಖೆಯು ಉಡುಪಿಯ ಡಿಸ್ಟಲರಿಯೊಂದರಲ್ಲೇ ಸುಮಾರು 4793 ಲೀಟರ್ ಸ್ಯಾನಿಟೈಸರ್ ಉತ್ಪಾದಿಸಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಸರಬರಾಜು ಮಾಡುತ್ತಿದೆ.

ರಾಜ್ಯ ಅಬಕಾರಿ ಆಯುಕ್ತರ ನಿರ್ದೇಶನದಂತೆ ಉಡುಪಿ ಜಿಲ್ಲಾ ಅಬಕಾರಿ ಇಲಾಖೆಯು ಬೆಂಗಳೂರಿನ ಔಷಧ ನಿಯಂತ್ರಣ ಇಲಾಖೆಯಿಂದ ಮಾ.26 ರಂದು ವಿಶೇಷ ಪರವಾನಿಗೆಯನ್ನು ಪಡೆದುಕೊಂಡು ಉಡುಪಿಯ ಸರ್ವದ ಡಿಸ್ಟಲರಿಯಲ್ಲಿ ಸ್ಯಾನಿಟೈಸರ್ಗಳನ್ನು ತಯಾರಿಸಿದೆ. ಇದು ರಾಜ್ಯದಲ್ಲೇ ಪ್ರಥಮ ಪ್ರಯೋಗವಾಗಿದ್ದು, ಉಡುಪಿಯಲ್ಲಿ ಈ ಪ್ರಯೋಗ ಯಶಸ್ವಿಯಾಗಿರುವುದರಿಂದ ಇದನ್ನು ಈಗ ರಾಜ್ಯದ ಬೇರೆ ಜಿಲ್ಲೆ ಗಳಲ್ಲೂ ಅನುಷ್ಟಾನಕ್ಕೆ ತರಲಾಗಿದೆ.

ಔಷಧ ನಿಯಂತ್ರಣ ಇಲಾಖೆ ನೀಡಿರುವ ಪರವಾನಿಗೆಯಲ್ಲಿ ಸ್ಯಾನಿಟೈಸರ್ ತಯಾರಿಸುವ ಫಾರ್ಮುಲವನ್ನು ತಿಳಿಸಲಾಗಿದ್ದು, ಅದರಂತೆಯೇ ಸ್ಯಾನಿಟೈಸರ್ ಗಳನ್ನು ತಯಾರಿಸಲಾಗಿದೆ. ಉತ್ಪಾದನೆಯ ಬಳಿಕ ಅದರ ಮಾದರಿಯನ್ನು ಉಡುಪಿ ಸಹಾಯಕ ಔಷಧ ನಿಯಂತ್ರಕರು ಪರೀಕ್ಷೆಗೆ ಒಳಪಡಿಸಿದ್ದಾರೆ. ನಂತರ ಇವುಗಳನ್ನು ಬೇಡಿಕೆಗೆ ಅನುಸಾರವಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಸರಬರಾಜು ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಅಬಕಾರಿ ಇಲಾಖೆಯ ಉಪ ಆಯುಕ್ತ ನಾಗೇಶ್ ಕುಮಾರ್ ತಿಳಿಸಿದ್ದಾರೆ.

1350 ಲೀ. ಸರಬರಾಜಿಗೆ ಬಾಕಿ: ಮೂರು ಹಂತದಲ್ಲಿ ಒಟ್ಟು 3835 ಲೀಟರ್ ಸ್ಪೀರಿಟ್ ಬಳಸಿ ಒಟ್ಟು 4793ಲೀಟರ್ ಸ್ಯಾನಿಟೈಸರ್ ಗಳನ್ನು ಉತ್ಪಾದಿಸಲಾಗಿದ್ದು, ಒಂದು ಬಾಟಲಿ ಯಲ್ಲಿ 375 ಎಂಎಲ್ ಸ್ಯಾನಿಟೈಸರ್ ಇದ್ದು, ಅಂತಹ 24 ಬಾಟಲಿಗಳ(ಒಟ್ಟು 9ಲೀಟರ್) ಒಂದು ಬಾಕ್ಸ್‌ಗಳನ್ನು ತಯಾರಿಸಲಾಗಿದೆ.

ದ.ಕ. ಜಿಲ್ಲಾಡಳಿತ ಒಟ್ಟು 300 ಬಾಕ್ಸ್‌ಗಳ ಬೇಡಿಕೆ ಮುಂದಿಟ್ಟಿದ್ದು, ಮಾ.30ರಂದು ಮೊದಲ ಹಂತದಲ್ಲಿ 1800 ಲೀಟರ್ ಸ್ಯಾನಿಟೈಸರ್ಗಳ ನ್ನೊಳಗೊಂಡ 200 ಬಾಕ್ಸ್‌ಗಳನ್ನು ದ.ಕ. ಜಿಲ್ಲೆಗೆ ಸರಬರಾಜು ಮಾಡಲಾಗಿದೆ. ಎರಡನೆ ಹಂತದಲ್ಲಿ ಉಡುಪಿ ಜಿಲ್ಲೆಗೆ 1643.76 ಲೀಟರ್ ಸ್ಯಾನಿಟೈಸರ್ಗಳ 184 ಬಾಕ್ಸ್‌ಗಳನ್ನು ವಿತರಿಸಲಾಗಿದೆ.

ಮೂರನೆ ಹಂತದಲ್ಲಿ 1350 ಲೀಟರ್ ಸ್ಯಾನಿಟೈಜರ್‌ಗಳನ್ನು ಉತ್ಪಾದಿಸಲಾಗಿದ್ದು, ಇದರಲ್ಲಿ 100 ಬಾಕ್ಸ್‌ಗಳನ್ನು ದ.ಕ. ಜಿಲ್ಲೆಗೆ ವಿತರಿಸಲು ಬಾಕಿ ಇದೆ. ಅವುಗಳನ್ನು ಜಿಲ್ಲಾಡಳಿತ ನಾಳೆ ಪಡೆದುಕೊಳ್ಳಲಿದೆ. ಇನ್ನು 50 ಬಾಕ್ಸ್‌ಗಳು ಉಳಿದಿದ್ದು, ಅವುಗಳನ್ನು ಉಡುಪಿ ಜಿಲ್ಲಾಡಳಿತಕ್ಕೆ ಅಗತ್ಯ ಇದ್ದರೆ ನೀಡಲಾಗುವುದು ಎಂದು ನಾಗೇಶ್ ಕುಮಾರ್ ತಿಳಿಸಿದ್ದಾರೆ.

ಸಂಪನ್ಮೂಲಗಳ ಕೊರತೆ: ಈ ಸ್ಯಾನಿಟೈಸರ್ನ್ನು ಫಾರ್ಮುಲ ಪ್ರಕಾರ ಶೇ.80ರಷ್ಟು ಎಥಾನಲ್(ಆಲ್ಕೋಹಾಲ್), ಶೇ.0.125 ಹೈಡ್ರೋಜನ್ ಪೆರೋಕ್ಸೈಡ್, ಶೇ.1.45 ಗ್ಲಿಸರಲ್ ಮತ್ತು ಶುದ್ಧ ನೀರನ್ನು ಬಸಿಯೇ ಡಿಸ್ಟಲರಿ ಯಲ್ಲಿ ತಯಾರಿಸಲಾಗಿದೆ. ಔಷಧ ನಿಯಂತ್ರಣ ಇಲಾಖೆ ಪ್ರಕಾರ 375 ಎಂಎಲ್‌ನ ಒಂದು ಬಾಟಲಿಗೆ 187.5ರೂ. ದರ ನಿಗದಿಪಡಿಸಬೇಕು. ಆದರೆ ನಾವು ರಿಯಾಯಿತಿಯಾಗಿ ಒಂದು ಬಾಟಲಿಗೆ 96ರೂ. ದರವನ್ನು ನಿಗದಿ ಪಡಿಸಿದ್ದೇವೆ. ಇದನ್ನು ಜಿಲ್ಲಾಡಳಿತಕ್ಕೆ 80ರೂ.ನಲ್ಲಿ ಮಾರಾಟ ಮಾಡಲಾಗುತ್ತಿದೆ. ಸುಮಾರು 34 ಬಾಕ್ಸ್‌ಗಳನ್ನು ಉಡುಪಿ ಜಿಲ್ಲಾಡಳಿತಕ್ಕೆ ಉಚಿತವಾಗಿ ನೀಡಿದ್ದೇವೆ ಎಂದು ಅಬಕಾರಿ ಉಪ ಆಯುಕ್ತ ನಾಗೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

‘ಮುಂದೆ ವಿಶೇಷ ಪರವಾನಿಗೆಯನ್ನು ಪಡೆದು ಮತ್ತೆ ಸ್ಯಾನಿಟೈಸರ್ ನ್ನು ಉತ್ಪಾದಿಸಿ, ಸಾರ್ವಜನಿಕರು ಹಾಗೂ ಮಾರುಕಟ್ಟೆ ಬಿಡುಗಡೆ ಮಾಡುವ ಉದ್ದೇಶ ನಮ್ಮ ಮುಂದೆ ಇದೆ. ಆದರೆ ಸದ್ಯ ಲಾಕ್‌ಡೌನ್ ಹಿನ್ನೆಲೆಯಲ್ಲಿ ಫ್ಯಾಕ್ಟರಿಗಳು ಬಂದ್ ಆಗಿರುವುದರಿಂದ ಸಂಪನ್ಮೂಲದ ಕೊರತೆ ಎದುರಾಗಿದೆ. ಸದ್ಯ ನಮ್ಮಲ್ಲಿ ಸ್ಪಿರಿಟ್ ಬೇಕಾದಷ್ಟು ಇದ್ದರೂ ಉಳಿದಂತೆ ಹೈಡ್ರೋಜನ್ ಪೆರೋಕ್ಸೈಡ್ ಹಾಗೂ ಬಾಟಲಿಗಳು ಇಲ್ಲ. ಈ ಮೊದಲು ಇವುಗಳನ್ನು ಮಂಗಳೂರಿನಿಂದ ತರಿಸಿ, ತಯಾರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಆರೋಗ್ಯ ಇಲಾಖೆಗೆ ಆದ್ಯತೆ

ಉಡುಪಿಯಲ್ಲಿ ಉತ್ಪಾದಿಸಿ ಉಡುಪಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾದ ಸ್ಯಾನಿಟೈಸರ್ ಗಳಲ್ಲಿ ಆರೋಗ್ಯ ಇಲಾಖೆಗೆ ಆದ್ಯತೆ ನೀಡಲಾಗಿದೆ. ಆರಂಭ ದಲ್ಲಿ ಉತ್ಪಾದಿಸಿರುವ 34 ಬಾಕ್ಸ್‌ಗಳ ಪೈಕಿ 15 ಬಾಕ್ಸ್‌ಗಳನ್ನು ಆರೋಗ್ಯ ಇಲಾಖೆಗೆ ನೀಡಲಾಗಿದೆ.
ಉಳಿದಂತೆ ಪೊಲೀಸ್ ಇಲಾಖೆಯ ಮೂಲಕ ಎಲ್ಲ ಪೊಲೀಸ್ ಠಾಣೆ ಗಳಿಗೆ, ಜಿಲ್ಲಾಧಿಕಾರಿ ಕಚೇರಿಗಳ ವಿವಿಧ ಇಲಾಖೆಗಳಿಗೆ, ಕುಂದಾಪುರ ಎಸಿ ಕಚೇರಿ ಹಾಗೂ ಎಲ್ಲ ತಾಲೂಕು ಕಚೇರಿಗಳಿಗೆ, ಉಡುಪಿ ನಗರಸಭೆ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮತ್ತು ಪೌರಕಾರ್ಮಿಕರಿಗೆ ವಿತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News