ವಿದೇಶಗಳಿಂದ ಬಂದವರಿಂದ ಜಿಲ್ಲೆಗೆ ಕೊರೋನ ಭೀತಿ ಸದ್ಯಕ್ಕಿಲ್ಲ : ಉಡುಪಿ ಜಿಲ್ಲಾಧಿಕಾರಿ

Update: 2020-04-06 14:57 GMT

ಉಡುಪಿ, ಎ.6: ದೇಶದಲ್ಲಿ ನೋವೆಲ್ ಕೊರೋನ ವೈರಸ್‌ನ ಭೀತಿ ಪ್ರಾರಂಭಗೊಂಡ ಬಳಿಕ ಸುಮಾರು 2000ಕ್ಕೂ ಅಧಿಕ ಮಂದಿ ವಿದೇಶಗಳಿಂದ ಉಡುಪಿ ಜಿಲ್ಲೆಗೆ ಆಗಮಿಸಿದ್ದರು. ಇವರೆಲ್ಲರ ಹೋಮ್ ಕ್ವಾರೆಂಟೈನ್ ಅವಧಿ ಇದೀಗ ಮುಕ್ತಾಯಗೊಂಡಿದೆ. ಹೀಗಾಗಿ ವಿದೇಶಗಳಿಂದ ಬಂದವರಿಂದ ನಮ್ಮ ಜಿಲ್ಲೆಗೆ ಕೊರೋನ ಭಯ ಸದ್ಯಕ್ಕಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

ನಗರದ ಪುತ್ತಿಗೆ ವಿದ್ಯಾಪೀಠದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ಜಿಲ್ಲೆಯಲ್ಲಿ ಇದುವರೆಗೆ ಕೊರೋನ ವೈರಸ್‌ನ ಸೋಂಕು ಪತ್ತೆಯಾದ ಮೂವರ ನಿಕಟವರ್ತಿಗಳೆಲ್ಲರೂ ಐಸೋಲೇಷನ್ ವಾರ್ಡುಗಳಲ್ಲಿದ್ದಾರೆ. ಸದ್ಯ ಯಾರಲ್ಲೂ ರೋಗದ ಲಕ್ಷಣ ಕಂಡುಬಂದಿಲ್ಲ. ಅವರ ಪ್ರಾಥಮಿಕ ಸಂಪರ್ಕ ಇದ್ದವರ ಸ್ಯಾಂಪಲ್ ವರದಿಗಳೂ ನೆಗೆಟಿವ್ ಬಂದಿವೆ. ಹೀಗಾಗಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ನುಡಿದರು.

14ರವರೆಗೆ ಶಿಸ್ತುಸಂಯಮ ಪಾಲಿಸಿ: ನಿಗದಿಯಾದಂತೆ ಎ.14ರವರೆಗೂ ಜಿಲ್ಲೆಯಲ್ಲಿ ಲಾಕ್‌ಡೌನ್ ಅವಧಿ ಮುಂದುವರಿಯಲಿದೆ. ಲಾಕ್‌ಡೌನ್ ಅವಧಿ ಮುಂದುವರಿಯುವವರೆಗೆ ಜಿಲ್ಲೆಯ ಪ್ರತಿಯೊಬ್ಬರೂ ಶಿಸ್ತು ಸಂಯಮ ಪಾಲಿಸಬೇಕು. ಪ್ರತಿದಿನ ಬೆಳಗ್ಗೆ 7 ರಿಂದ 11:30ವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿರುತ್ತದೆ ಎಂದರು.

ಲಾಕ್‌ಡೌನ್ ಅವಧಿಯಲ್ಲಿ ಜನರು ಫ್ರಿಯಾಗಿ ತಿರುಗುವುದು ಕಂಡು ಬಂದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆದುದರಿಂದ ಈ ಅವಕಾಶವನ್ನು ಯಾರೂ ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಅವರು ಮನವಿ ಮಾಡಿದರು. ‘ಫ್ರಿ ಬಿಟ್ಟಿದ್ದಾರೆ, ಓಡಾಡಿಕೊಂಡು ಬರೋಣ ಅಂದ್ರೆ ವಾಹನ ಜಪ್ತಿ ಮಾಡ್ತೇವೆ. ಹೀಗಾಗಿ 14ರವರೆಗೆ ಎಲ್ಲರೂ ಮನೆಯೊಳಗೆ ಇರಿ.’ ಎಂದವರು ತಿಳಿಸಿದರು.

ದುಬೈಯಿಂದ ಬಂದು ಮಂಗಳೂರು ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿದ್ದಾಗ ಸೋಂಕು ಪತ್ತೆಯಾದ ಕಾರ್ಕಳದ ಮಹಿಳೆಯ ಜೊತೆ ಅದೇ ವಿಮಾನದಲ್ಲಿ ಜಿಲ್ಲೆಯ 33 ಮಂದಿ ಪ್ರಯಾಣ ಮಾಡಿದ್ದರು. ಇವರೆಲ್ಲರನ್ನೂ ಪತ್ತೆ ಮಾಡಿ ಆರೋಗ್ಯ ತಪಾಸಣೆ ನಡೆಸಿ ಹೋಮ್ ಕ್ವಾರಂಟೈನ್‌ನಲ್ಲಿರಿಸಿದ್ದೇವೆ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದರು.

ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಅಲ್ಲಿದ್ದ ಜಿಲ್ಲೆಯ ಎಲ್ಲಾ 16 ಮಂದಿಯನ್ನು ಗುರುತಿಸಿ ಅವರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದ್ದು, ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಜಿ.ಜಗದೀಶ್ ವಿವರಿಸಿದರು.

ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ನಿರಾಶ್ರಿತರು, ವಲಸೆ ಕಾರ್ಮಿಕರು ಹಾಗೂ ಬಡವರ ನೆರವಿಗೆ ಸಾಕಷ್ಟು ಮಂದಿ ಧಾವಿಸಿದ್ದಾರೆ. ಅವರೆಲ್ಲರ ಊಟೋಪಚಾರ ಮತ್ತು ದಿನಸಿಯನ್ನು ದಾನಿಗಳ ನೆರವಿನಿಂದ ನಿರ್ವಹಿಸಲಾಗಿದೆ ಎಂದೂ ಜಿಲ್ಲಾಧಿಕಾರಿ ಹೇಳಿದರು.

ಇದುವರೆಗೆ ಜಿಲ್ಲಾಡಳಿತ ಸರಕಾರದ ಯಾವುದೇ ಅನುದಾನವನ್ನು ಇವರಿಗಾಗಿ ಬಳಸಿಲ್ಲ. ಕೇಂದ್ರ ಸರಕಾರ ರಾಜ್ಯಗಳಿಗೆ ಘೋಷಿಸಿದ ಪ್ಯಾಕೇಜ್ ಕುರಿತು ತಮಗೇನೂ ತಿಳಿಯದು. ಆದರೆ ಇದುವರೆಗೆ ಜಿಲ್ಲೆಗೆ ಒಂದು ರೂ. ಕೂಡಾ ಬಂದಿಲ್ಲ ಎಂದೂ ಜಿ.ಜಗದೀಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News