ಪುತ್ತಿಗೆಶ್ರೀಗಳಿಂದ 500ಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

Update: 2020-04-06 15:08 GMT

ಉಡುಪಿ, ಎ.6: ನೋವೆಲ್ ಕೊರೋನ ವೈರಸ್ ವಿರುದ್ಧ ಘೋಷಿಸಲಾದ ಲಾಕ್‌ಡೌನ್ ಪರಿಣಾಮ ದಿನನಿತ್ಯದ ಬದುಕಿನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಉಡುಪಿ ಆಸುಪಾಸಿನ ಸುಮಾರು 500ಕ್ಕೂ ಅಧಿಕ ಕುಟುಂಬಗಳಿಗೆ ಮುಂದಿನ 15 ದಿನಗಳ ಕಾಲ ಬೇಕಾಗುವ ಸುಮಾರು ಐದು ಲಕ್ಷ ರೂ.ಮೌಲ್ಯದ ನಿತ್ಯ ಬಳಕೆಯ ಹಾಗೂ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಸೋಮವಾರ ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಉಡುಪಿ ಶಾಸಕ ಕೆ. ರಘುಪತಿ ಭಟ್, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೌರಯ್ಯ ಅವರು ವಸ್ತುಗಳನ್ನು ಸ್ವೀಕರಿಸಿದರು.

ಇವುಗಳಲ್ಲಿ ಯಾವುದನ್ನೂ ವ್ಯರ್ಥಗೊಳಿಸದೇ ಅತ್ಯಂತ ಸಂಕಷ್ಟದಲ್ಲಿರುವ ನಿರಾಶ್ರಿತ, ವಲಸೆ ಕುಟುಂಬಗಳಿಗೆ ವಿತರಿಸುವ ಭರವಸೆಯನ್ನು ಅವರು ಪುತ್ತಿಗೆ ಶ್ರೀಗಳಿಗೆ ನೀಡಿದರು. ಈ ವೇಳೆ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ,ಮ್ಯಾನೇಜರ್ ವಿಷ್ಣುಮೂರ್ತಿ ಉಪಾಧ್ಯಾಯ, ಸಂತೋಷ ಶೆಟ್ಟಿ ಉಪಸ್ಥಿತರಿದ್ದರು.

ಮಠದಿಂದ 10 ಲಕ್ಷ ರೂ.ದೇಣಿಗೆ:  ಈ ಸಂದರ್ಭದಲ್ಲಿ ಮಾತನಾಡಿದ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ, ದೇಶಾದ್ಯಂತ ಅಟ್ಟಹಾಸ ಮಾಡುತ್ತಿರುವ ಕೊರೋನ ವೈರಸ್ ನಿಯಂತ್ರಣಕ್ಕೆ ನಮ್ಮ ಮಠದ ವತಿಯಿಂದ 10 ಲಕ್ಷ ರೂ.ದೇಣಿಗೆಯನ್ನು ನೀಡುತಿದ್ದೇವೆ. ಕೊರೋನ ವೈರಸ್‌ನ್ನು ಉದ್ದೇಶ ಪೂರ್ವಕವಾಗಿ ಪಸರಿಲಾಗುತ್ತಿದೆ ಎಂಬ ಅನುಮಾನ ನಮಗಿದೆ ಎಂದರು.

ಕೊರೋನ ವೈರಸ್ ನರಕಾಸುರನಂತೆ ಭಾಸವಾಗುತ್ತಿದೆ. ನರಕಾಸುರನ ಸಂಹಾರಕ್ಕೆ ಕೃಷ್ಣನೇ ಅವತಾರ ಎತ್ತಿಬರಬೇಕು ಎಂದವರು ನುಡಿದರು.

ಮಾನವನ ತಪ್ಪುಗಳ ಪರಿಣಾಮ: ಮಾನವ ಜನಾಂಗ ಮಾಡಿದ ತಪ್ಪುಗಳಿಂದಲೇ ನಮಗಿಂದು ಈ ಪರಿಸ್ಥಿತಿ ಬಂದಿದೆ. ನಾವು ಪ್ರಾಚೀಣ ವೌಲ್ಯಗಳನ್ನು ಬದಿಗೆ ಇಟ್ಟಿದ್ದೇವೆ. ಅನಗತ್ಯ ಪ್ರಾಣಿ ಸಂಹಾರದಿಂದ ಕೊರೋನ ಬಂದಿದೆ. ಮನುಷ್ಯನ ದೇಹಕ್ಕೆ ಸಸ್ಯಾಹಾರವೇ ಸೂಕ್ತ. ಮನುಷ್ಯ ಬದುಕಲು ಮಾಂಸಾಹಾರದ ಅಗತ್ಯ ಇಲ್ಲ ಎಂದು ಪುತ್ತಿಗೆಶ್ರೀ ನುಡಿದರು.

ಮಾನವ ಸಮುದಾಯ ವಿಧ್ವಂಸಕ ಚಿಂತನೆಯಲ್ಲಿ ಸಾಗುತ್ತಿದೆ. ಭಗವಂತ ಭೂಮಿಯನ್ನು ಸೃಷ್ಟಿ ಮಾಡಿದ್ದು ಬದುಕುವುದಕ್ಕಾಗಿ.ಆದರೆ ಮನುಷ್ಯರು ಶಸ್ತ್ರಾಸ್ತ್ರ ಒಗ್ಗೂಡಿಸುವಲ್ಲಿ ನಿರತರಾಗಿದ್ದಾರೆ. ಕರೋನಾದಿಂದ ಜಗತ್ತನ್ನು ನಾಶ ಮಾಡ ಬಹುದೆಂು ದುಷ್ಟರಿಗೆ ಗೊತ್ತಾಗಿದೆ ಎಂದರು.

ಉದ್ದೇಶಪೂರ್ವಕವಾಗಿ ಕೊರೋನ ಹರಡುವ ಪ್ರಯತ್ನವೂ ನಡೆದಿರ ಬಹುದು. ಜಾಗತಿಕ ಮಟ್ಟದ ವೇದಿಕೆಯಲ್ಲಿ ಕೊರೋನ ಬಗ್ಗೆ ಚರ್ಚೆಯಾಗ ಬೇಕಾಗಿದೆ. ಈಗಾಗಲೇ ವಿಶ್ವದ ಧಾರ್ಮಿಕ ನಾಯಕರ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದೇನೆ. ಕರೋನಾದ ವಿರುದ್ಧ ದೂರಗಾಮಿ ಆಲೋಚನೆಯ ಅಗತ್ಯತೆ ಇದೆ ಎಂದವರು ಹೇಳಿದರು.

ಇತರ ದೇಶಗಳಲ್ಲೂ ಕೊರೋನ ಸಮಸ್ಯೆಯ ತೀವ್ರತೆಯನ್ನು ತಿಳಿದುಕೊಳ್ಳ ಬೇಕಾಗಿದೆ. ಕೊರೋನದಿಂದ ಪುತ್ತಿಗೆ ಮಠದ ವಿದೇಶಿ ಶಾಖೆಗಳಿಗೆ ತೊಂದರೆ ಯಾಗಿದೆ. ಅಮೆರಿಕ, ಲಂಡನ್‌ಗಳಲ್ಲಿರುವ 11 ಶಾಖೆಗಳನ್ನು ಮುಚ್ಚಿದ್ದೇವೆ. ಮಠದ ಸಿಬ್ಬಂದಿಗಳು, ಅರ್ಚಕರು ಗೊಂದಲದಲ್ಲಿದ್ದಾರೆ ಎಂದು ಶ್ರೀಗುಣೇಂದ್ರ ತೀರ್ಥರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News