ವ್ಯಾಸರಾಯ್ ಶೆಟ್ಟಿಗಾರ್‌ಗೆ ನೇಕಾರಿಕೆ ‘ಶಾಂತಿಪ್ರಸಾದ್ ರಾ.ಪ್ರಶಸ್ತಿ’

Update: 2020-04-06 16:02 GMT

ಉಡುಪಿ, ಎ.6: ಭಾರತದ ಕರಕುಶಲ ನಿಗಮ (ಸಿಸಿಐ) ನೇಕಾರಿಕೆಯ ಕೌಶಲ್ಯಕ್ಕಾಗಿ ರಾಷ್ಟ್ರಮಟ್ಟದಲ್ಲಿ ಪ್ರತಿ ವರ್ಷ ನೀಡುವ ಪ್ರತಿಷ್ಠಿತ ‘ಶಾಂತಿಪ್ರಸಾದ್ ಪ್ರಶಸ್ತಿ’ಗೆ ಈ ಬಾರಿ ಉಡುಪಿ ಸೀರೆ ನೇಕಾರರಾದ ್ಯಾಸರಾಯ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ.

ಎ.18ರಂದು ಚೆನ್ನೈಯಲ್ಲಿ ನಡೆಯಬೇಕಾಗಿದ್ದ ಪ್ರಶಸ್ತಿ ವಿತರಣಾ ಸಮಾರಂಭವನ್ನು ಕೋವಿಡ್-19 ಲಾಕ್ಡೌನ್ ಕಾರಣದಿಂದ ಮುಂದೂಡಲಾಗಿದೆ.

79 ವರ್ಷ ಪ್ರಾಯದ ವ್ಯಾಸರಾಯ ಶೆಟ್ಟಿಗಾರ್ ಈಗ ಕರಾವಳಿ ಜಿಲ್ಲೆಯ ಲ್ಲಿರುವ ಒಂಭತ್ತು ಮಂದಿ 80ಕೌಂಟಿನ (ನೂಲಿನ ಸೂಕ್ಷ್ಮತೆ) ನೇಕಾರರಲ್ಲಿ ಒಬ್ಬರಾಗಿದ್ದಾರೆ. ನೇಕಾರ ಬಳಗದಲ್ಲಿ ‘ಮಾಸ್ಟರ್’ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ ವ್ಯಾಸರಾಯ ಶೆಟ್ಟಿಗಾರ್, ಸುಂದರ ನಾಜೂಕಿನ ನೇಯ್ಗೆ ಮತ್ತು ಸೀರೆಯ ವೈವಿಧ್ಯಮಯ ವಿನ್ಯಾಸಕ್ಕೆ ಪ್ರಸಿದ್ಧರು. ಅನೇಕರಿಗೆ ನೇಕಾರಿಕೆಯ ಕುಶಲತೆಯನ್ನು ಕಲಿಸಿದ ಹೆಗ್ಗಳಿಕೆಯನ್ನೂ ಇವರು ಹೊಂದಿದ್ದಾರೆ.

ತಮ್ಮ 15ನೇ ವಯಸ್ಸಿನಲ್ಲಿ ನೇಕಾರಿಕೆಯನ್ನು ಪ್ರಾರಂಭಿಸಿದ ವ್ಯಾಸರಾಯರು ಅಲ್ಲಿಂದ ನಿರಂತರವಾಗಿ ಕೈಮಗ್ಗದಲ್ಲಿ ನೇಯುತ್ತಾ ಬಂದಿದ್ದಾರೆ. ಹಳೆಯಂಗಡಿ ಸಮೀಪದ ಪಡುಪಣಂಬೂರು ನೇಕಾರರ ಸಂಘದ ಸದಸ್ಯರಾಗಿರುವ ಇವರು ಈ ಹಿಂದೆ ಎರಡು ಬಾರಿ ರಾಜ್ಯ ಪ್ರಶಸ್ತಿ ಮತ್ತು ಕಳೆದ ವರ್ಷ ಚರಕ ಸಂಸ್ಥೆ ಕೊಡಮಾಡುವ ‘ಕಾಯಕ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಹಲವು ಸ್ಥಳೀಯ ಸಂಸ್ಥೆಗಳು ಸಹ ಇವರನ್ನು ಸನ್ಮಾನಿಸಿವೆ.

ಕಡಿಮೆ ವೇತನ ಇದ್ದರೂ ತಮ್ಮ ವೃತ್ತಿಯ ಮೇಲಿನ ಪ್ರೀತಿಯಿಂದ ನೇಕಾರಿಕೆ ಯನ್ನು ಮುಂದುವರಿಸಿರುವ ವ್ಯಾಸರಾಯರು, ಕದಿಕೆ ಟ್ರಸ್ಟ್‌ನ ಪ್ರಯತ್ನದಿಂದ ಕಳೆದೆರಡು ವರ್ಷಗಳಿಂದ ಶ್ರಮಕ್ಕೆ ತಕ್ಕ ವೇತನವನ್ನು ಪಡೆಯುತಿದ್ದಾರೆ. ಪ್ರತಿಷ್ಠಿತ ಪ್ರಶಸ್ತಿಗೆ ವ್ಯಾಸರಾಯ ಶೆಟ್ಟಿಗಾರ್ ಆಯ್ಕೆ ಯಾಗಿರುವುದಕ್ಕೆ ಉಡುಪಿ ಸೀರೆ ನೇಕಾರರು ಹರ್ಷ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News