ಮುಸ್ಲಿಮರಿಗೆ ಅಭಯ ನೀಡಿದ ಮುಖ್ಯಮಂತ್ರಿ: ವಿವಿಧ ಸಂಘಟನೆಗಳ ಸ್ವಾಗತ

Update: 2020-04-06 17:25 GMT

ಮಂಗಳೂರು, ಎ. 6: ಕೊರೋನ ವೈರಸ್ ಕುರಿತಂತೆ ಮುಸ್ಲಿಮ್ ಸಮುದಾಯವನ್ನು ನಿಂದಿಸುವ, ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ, ಮುಸ್ಲಿಮ್ ವ್ಯಾಪಾರಿಗಳಿಗೆ ಪ್ರವೇಶವಿಲ್ಲ ಎಂದು ಸಾರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕ್ರಮದ ಬಗ್ಗೆ ವಿವಿಧ ಸಂಘಟನೆಗಳು ಸ್ವಾಗತ ವ್ಯಕ್ತಪಡಿಸಿದೆ.

ರಾಜ್ಯ ದಾರಿಮಿ ಉಲಮಾ ಒಕ್ಕೂಟ: ದಿಲ್ಲಿಯ ನಿಝಾಮುದ್ದೀನ್ ಪ್ರಕರಣವನ್ನು ಮುಂದಿಟ್ಟುಕೊಂಡು ಮುಸ್ಲಿಮ್ ಸಮುದಾಯದ ವಿರುದ್ದ ವ್ಯಾಪಕ ಅಪಪ್ರಚಾರದಲ್ಲಿ ತೊಡಗಿಸುತ್ತಾ ದೇಶದ ಪ್ರಜೆಗಳ ಮಧ್ಯೆ ದ್ವೇಷ ಬಿತ್ತುವವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಅಧ್ಯಕ್ಷ ಎಸ್‌ಬಿ ಮುಹಮ್ಮದ್ ದಾರಿಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಸ್‌ವೈಎಸ್ ಜಿಲ್ಲಾ ಸಮಿತಿ: ಕೊರೋನ ರೋಗದ ನಿಗ್ರಹಕ್ಕಾಗಿ ಮನೆಯಲ್ಲಿ ಕೂರುವ ಪರಿಸ್ಥಿತಿಯಲ್ಲಿರುವ ವೇಳೆ ಕೆಲವು ಕೋಮುವಾದಿ ಸಂಘಟನೆಗಳು ಮತ್ತು ಸಮಾಜ ಘಾತುಕ ಶಕ್ತಿಗಳು ಹಾಗು ಕೆಲವು ಮಾಧ್ಯಮಗಳು ಮುಸ್ಲಿಮ್ ಸಮುದಾಯವನ್ನು ತೇಜೋವಧೆಗೆಯ್ಯಲು ಶತಾಯಗತಾಯ ಪ್ರಯತ್ನ ಮಾಡುತ್ತಿತ್ತು. ಇಂತಹಾ ಸಂದರ್ಭ ಮುಖ್ಯಮಂತ್ರಿ ಯಡಿಯೂರಪ್ಪ ಮುಸ್ಲಿಮರಿಗೆ ಅಭಯ ನೀಡಿರುವುದು ಶ್ಲಾಘನೀಯ ಎಂದು ಎಸ್‌ವೈಎಸ್ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ತಿಳಿಸಿದ್ದಾರೆ.

ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ: ಕೆಲವು ಕೋಮುವಾದಿ ಶಕ್ತಿಗಳು ಮತ್ತು ಕೋಮುವಾದಿ ಮಾಧ್ಯಮಗಳು ಮುಸ್ಲಿಮರನ್ನು ನಿಂದಿಸುವ ಚಾಳಿಯೇ ಮಧ್ಯೆಯೇ ಮುಖ್ಯಮಂತ್ರಿಯ ಮಧ್ಯ ಪ್ರವೇಶವು ಸಮಯೋಚಿತವಾಗಿದೆ. ತಬ್ಲೀಗ್ ಜಮಾತ್‌ನವರು ನಡೆಸಿದ ಸಮಾವೇಶದ ನೆಪದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಅನಗತ್ಯ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದು ವೇದಿಕೆಯ ಅಧ್ಯಕ್ಷ ಕೆ.ಎ.ಅಬ್ದುಲ್ ಅಝೀಝ್ ಪುಣಚ ತಿಳಿಸಿದ್ದಾರೆ.

ಮುಸ್ಲಿಮ್ ಒಕ್ಕೂಟ ಸ್ವಾಗತ

ದೇಶದ, ರಾಜ್ಯದ ಮತ್ತು ಜಿಲ್ಲೆಯ ವಿವಿಧೆಡೆ ದುಷ್ಕರ್ಮಿಗಳು ಮುಸ್ಲಿಮ್ ಸಮುದಾಯದ ಜನರ ಚಲನೆ, ವ್ಯವಹಾರ, ಸಂವಹನಕ್ಕೆ  ತಡೆಯೊಡ್ಡು ವುದು ಮುಸ್ಲಿಮರ ವಿರುದ್ಧ ಸಾಮಾಜಿಕ ಬಹಿಷ್ಕಾರ ಹಾಕುವುದು, ಸಾಮಾಜಿಕ ಜಾಲ ತಾಣಗಳಲ್ಲಿ ಅವಹೇಳನ ಕಾರಿ ಮತ್ತು ನಿಂದನಾತ್ಮಕ ಬರಹಗಳು ಮತ್ತು ಪೋಸ್ಟ್ ಗಳನ್ನು ಪ್ರಕಟಿಸುವುದು ಕಂಡು ಬರುತ್ತಿದೆ.

ಕೊರೋನ ಸೋಂಕು ನಿಯಂತ್ರಣಕ್ಕಾಗಿ ಮುಸ್ಲಿಮರು ಇಂದು ಜಾಗತಿಕವಾಗಿ , ದೇಶೀಯವಾಗಿ ಮತ್ತು ಸ್ಥಳೀಯವಾಗಿ  ತಮ್ಮ ಜೀವನದಲ್ಲಿ ಎಂದೂ ಕೂಡ ಮಸೀದಿ ಆಧಾರಿತ ಸಾಮೂಹಿಕ ನಮಾಝ್ ಪ್ರಕ್ರಿಯೆಯನ್ನೂ ನಿಲುಗಡೆಗೊಳಿಸಲು ರಾಜಿ ಹೊಂದದ ಮನಸ್ಥಿತಿಯಿಂದ ಹೊರಬಂದು ದೇಶದ ಸರ್ವತೋಮುಖ ಆರೋಗ್ಯದ ದೃಷ್ಟಿಯಿಂದ ಅನುಷ್ಠಾನಗೊಂಡ ಲಾಕ್ ಡೌನ್ ನು ಗೌರವಿಸಿ ಇಂದು ಸರ್ವರೂ ಜಮಾತ್ ಮತ್ತು ಜುಮಾ ನಮಾಝ್ ಪ್ರಕ್ರಿಯೆಯನ್ನೂ ನಿಲುಗಡೆಗೊಳಿಸಿ ಸೋಂಕು ನಿಯಂತ್ರಣಕ್ಕೆ ಸರ್ವ ತೋಮುಖವಾಗಿ ಸಹಕರಿಸುತ್ತಿದ್ದಾರೆ.

ಈ ಬಗ್ಗೆ ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶ್ಲಾಘಿಸಿ ಹೇಳಿಕೆ ಕೂಡ ನೀಡಿರುತ್ತಾರೆ. ಆದರೂ ಕೆಲವು ದುಷ್ಕರ್ಮಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಮುಸ್ಲಿಮ್ ಸಮುದಾಯವನ್ನು ನಿಂದಿಸುವ ಪ್ರಕ್ರಿಯೆ ಮುಂದುವರಿದಿರುವುದು ಖೇದಕರ. ಇಂದು ಸಿಎಂ ಯಡಿಯೂರಪ್ಪ ಅವರು ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಕುರಿತು ಹೇಳಿಕೆ ನೀಡಿರುತ್ತಾರೆ. ಈ ಬಗ್ಗೆ ಸ್ವಾಗತವಿದೆ ಮತ್ತು ಮುಂದಿನ ದಿನಗಳಲ್ಲಿ ದುಷ್ಕರ್ಮಿ ಗಳು ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ಪೂರ್ವಗ್ರಹ ಬರಹ, ಪೊಸ್ಟ್ ಪ್ರಕಟಣೆ ಮತ್ತು ಸಾಮಾಜಿಕ ಬಹಿಷ್ಕಾರ ದಂತಹ ಕೃತ್ಯಗಳಿಗೆ ಕಡಿವಾಣ ಸೃಷ್ಟಿಯಾಗಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷರು, ಮಾಜಿ ಮೇಯರ್ ಕೆ.ಅಶ್ರಫ್ ಒತ್ತಾಯಿಸಿದ್ದಾರೆ.

ಸರಕಾರದ ಕ್ರಮ ಸ್ವಾಗತಾರ್ಹ: ಯುನಿವೆಫ್ ಕರ್ನಾಟಕ 

ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಕೊರೋನವನ್ನು ನೆಪವಾಗಿಟ್ಟು ನಿರಂತರ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಾ ಪ್ರಚೋದನಾತ್ಮಕವಾಗಿ ಸಮುದಾಯಗಳ ಮಧ್ಯೆ ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಕೋಮು ವಿಕೃತಿ ಮನೋಸ್ಥಿತಿಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರವರ ಹೇಳಿಕೆಯನ್ನು ಯುನಿವೆಫ್ ಕರ್ನಾಟಕ ಸ್ವಾಗತಿಸುತ್ತದೆ ಮತ್ತು ಈ ಕ್ರಮಕ್ಕಾಗಿ ಅವರನ್ನು ಅಭಿನಂದಿಸುತ್ತದೆ.

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಿದ ಹಾಗೂ ಪ್ರಚೋದನಾತ್ಮಕ ವಿಚಾರಗಳನ್ನು ಬಿತ್ತರಿಸಿದ ಕಿಡಿಗೇಡಿಗಳ ವಿರುದ್ಧ ದ.ಕ. ಜಿಲ್ಲಾಡಳಿತ ತೆಗೆದುಕೊಂಡ ಕ್ರಮಗಳನ್ನೂ ಯುನಿವೆಫ್ ಕರ್ನಾಟಕ ಸ್ವಾಗತಿಸುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರವನ್ನು ನೀಡಲು ಯುನಿವೆಫ್ ಕರ್ನಾಟಕ ಬಯಸುತ್ತದೆ ಎಂದು ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ತಿಳಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News