ಕೊರೋನ ಪ್ರಚಾದನಕಾರಿ ಪೋಸ್ಟ್ : ನಂದಾವರದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

Update: 2020-04-06 16:53 GMT

ಬಂಟ್ವಾಳ, ಎ. 6: ಕೊರೋನ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ಸಮುದಾಯವನ್ನು ನಿಂದಿಸಿ ಅವಹೇಳನ ಮಾಡಿರುವ ಆರೋಪಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್.ಡಿ.ಪಿ.ಐ. ನಂದಾವರ ಬ್ರಾಂಚ್ ಅಧ್ಯಕ್ಷ ಮುಹಮ್ಮದ್ ಆಸಿಫ್ ಇಬ್ರಾಹೀಂ ಎಂಬವರು ನೀಡಿರುವ ದೂರಿನಂತೆ, ನಂದಾವರ ನಿವಾಸಿ ಚರಣ್ ಗಟ್ಟಿ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿ ಚರಣ್ ಗಟ್ಟಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಕೊರೋನ ವೈರಸ್ ಹರಡುವಿಕೆಗೆ ಮುಸ್ಲಿಮರು ಕಾರಣವೆಂದು ಮಸೀದಿ, ಮುಸ್ಲಿಮ್ ಧರ್ಮಗುರುಗಳ ಬಗ್ಗೆ ನಿಂದಿಸಿ, ಅವಹೇಳನಕಾರಿ ಪೋಸ್ಟ್ ಗಳನ್ನು ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 

ಮಂದಿರಗಳಿಂದ ಹರಿದು ಬರುತ್ತಿದೆ ದಾನ, ಮಸೀದಿಗಳಿಂದ ಹರಿದು ಬರುತ್ತಿದೆ ಕೊರೋನ., ಮೊನ್ನೆ ಚಪ್ಪಾಳೆ ತಟ್ಟಿದ ಜನರ ಬಗ್ಗೆ ಅಪಹಾಸ್ಯ ಮಾಡಿದ ಬುದ್ಧಿವಂತರು... ಸ್ವಲ್ಪ ದೆಹಲಿ ಜಾಮಿಯಾ ಮಸೀದಿ ಬಗ್ಗೆ ಅಪಹಾಸ್ಯ ಮಾಡಲ್ವಾ??, ಎರಡು ವೈರಸ್ ಗಳು ಬಿಡುವಿನಲ್ಲಿ ಮಾತನಾಡುತ್ತಿದ್ದವು, ನಾನು ಕೊರೋನ! ನೀನು? ನಾನು ಮೌಲಾನಾ!, ಜನರಿಂದ 1 ಮೀಟರ್, ಮುಸ್ಲಿಮರಿಂದ 1 ಕಿಲೋಮೀಟರ್ ಕಡ್ಡಾಯವಾಗಿ ದೂರವಿರಿ! ಜನಹಿತಕ್ಕಾಗಿ ಜಾರಿ., ಬಾಂಬ್ ಸ್ಪೋಟ ಆದಾಗ ಶಂಕಿತರು ಅವರೆ, ಕೊರೋನ ಬಂದಾಗ ಸೋಂಕಿತರು ಅವರೇ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್‌ ಹಾಕಿ ಹಂಚಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಯು ಸಮಾಜದಲ್ಲಿ ಕೋಮು ವೈಷಮ್ಯವನ್ನು ಹರಡಿ ಕೋಮು ಗಲಭೆ, ಅಶಾಂತಿ ನಡೆಸುವ ಹುನ್ನಾರವನ್ನು ಹೊಂದಿದ್ದು ಆದ್ದರಿಂದ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News