ದೇಶದಲ್ಲಿ 490 ಹೊಸ ಕೊರೋನ ವೈರಸ್ ಪ್ರಕರಣಗಳು ದಾಖಲು: 109 ಮಂದಿ ಮೃತ್ಯು

Update: 2020-04-06 17:07 GMT

ಹೊಸದಿಲ್ಲಿ,ಎ.6: ಕಳೆದ 12 ಗಂಟೆಗಳಲ್ಲಿ ಭಾರತದಲ್ಲಿ 490 ಕೊರೋನ ವೈರಸ್ ಪ್ರಕರಣಗಳು ಹೊಸದಾಗಿ ದಾಖಲಾಗಿದ್ದು, ಸೋಮವಾರ ಬೆಳಿಗ್ಗೆ ಇದ್ದಂತೆ ಒಟ್ಟು ಪ್ರಕರಣಗಳ ಸಂಖ್ಯೆ 4,067ಕ್ಕೇರಿದೆ. ದೇಶದಲ್ಲಿ ಕೊರೋನ ವೈರಸ್‌ಗೆ ಸಂಬಂಧಿಸಿದಂತೆ ಈವರೆಗೆ 109 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

ಸಚಿವಾಲಯವು ಸೋಮವಾರ ಬೆಳಿಗ್ಗೆ ಒಂಭತ್ತು ಗಂಟೆಗೆ ಬಿಡುಗಡೆಗೊಳಿಸಿರುವ ಅಂಕಿಅಂಶಗಳಂತೆ ಕೊರೋನ ವೈರಸ್‌ನ 3,666 ಸಕ್ರಿಯ ಪ್ರಕರಣಗಳಿವೆ ಮತ್ತು ಒಟ್ಟು 291 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ.

ಈವರೆಗೆ ದೇಶದಲ್ಲಿಯ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ 30ರಲ್ಲಿ ಕೊರೋನ ವೈರಸ್ ಪ್ರಕರಣಗಳು ಮತ್ತು ಸಾವುಗಳು ವರದಿಯಾಗಿವೆ.

ಕೊರೋನ ವೈರಸ್ ಸೋಂಕಿನಿಂದ ಅತ್ಯಂತ ಪೀಡಿತ ರಾಜ್ಯವಾಗಿರುವ ಮಹಾರಾಷ್ಟ್ರದಲ್ಲಿ 45 ಸಾವುಗಳು ಸೇರಿದಂತೆ 777 ಪ್ರಕರಣಗಳು ವರದಿಯಾಗಿವೆ. 584 ರೋಗಿಗಳೊಂದಿಗೆ ತಮಿಳುನಾಡು ಎರಡನೇ ಮತ್ತು ಏಳು ಸಾವುಗಳೊಂದಿಗೆ 528 ಪ್ರಕರಣಗಳು ದಾಖಲಾಗಿರುವ ದಿಲ್ಲಿ ಮೂರನೇ ಸ್ಥಾನದಲ್ಲಿವೆ.

ಕಳೆದ ತಿಂಗಳು ನಿಝಾಮುದ್ದೀನ್‌ನಲ್ಲಿ ನಡೆದಿದ್ದ ತಬ್ಲೀಗಿ ಜಮಾಅತ್‌ನ ಸಮಾವೇಶದಲ್ಲಿ ಭಾಗಿಯಾಗಿದ್ದ ನೂರಾರು ಜನರಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟ ಬಳಿಕ ದಿಲ್ಲಿಯಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಮುಂಬೈ ಹಾಗೂ ಪುಣೆ ಮತ್ತು ನಾಗ್ಪುರಗಳಂತಹ ಮಹಾರಾಷ್ಟ್ರದ ಇತರ ನಗರಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಕೊರೋನ ವೈರಸ್ ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗಿದೆ. ಈ ಪೈಕಿ ಶೇ.85ರಷ್ಟು ಪ್ರಕರಣಗಳು ಮುಂಬೈ ಮತ್ತು ಪುಣೆ ಜಿಲ್ಲೆಯಲ್ಲಿ ದಾಖಲಾಗಿವೆ.

ತನ್ಮಧ್ಯೆ,ದೇಶವ್ಯಾಪಿ ಲಾಕ್‌ಡೌನ್ ಅಂತ್ಯಗೊಳ್ಳಲಿರುವ ಎ.14ರ ಬಳಿಕ ಸಾಮಾನ್ಯ ಚಟುವಟಿಕೆಗಳು ಸಾಧ್ಯವಾಗುವಂತಾಗಲು ತಮ್ಮ ಬಹುಹಂತಗಳ ಯೋಜನೆಯ ಭಾಗವಾಗಿ ಮೊದಲು ಕೊರೋನ ವೈರಸ್ ಪ್ರಕರಣಗಳಿಲ್ಲದ ಜಿಲ್ಲೆಗಳಲ್ಲಿ ಜನರ ಚಲನವಲನ ಮತ್ತು ವಾಣಿಜ್ಯಿಕ ಚಟುವಟಿಕೆಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಸಲಾಗುವುದು ಎಂದು ಹಲವು ರಾಜ್ಯಗಳ ಅಧಿಕಾರಿಗಳು ತಿಳಿಸಿದ್ದಾರೆ.

ರವಿವಾರಕ್ಕೆ ಇದ್ದಂತೆ ದೇಶದ 718 ಜಿಲ್ಲೆಗಳ ಪೈಕಿ 274ರಲ್ಲಿ ಕೊರೋನ ವೈರಸ್ ಪ್ರಕರಣಗಳು ದಾಖಲಾಗಿವೆ. ಏಳು ರಾಜ್ಯಗಳಲ್ಲಿಯ 230 ಜಿಲ್ಲೆಗಳ ಪೈಕಿ 21 ಜಿಲ್ಲೆಗಳನ್ನು ಕೊರೋನ ವೈರಸ್ ಹಾಟ್ ಸ್ಪಾಟ್‌ಗಳೆಂದು ಪರಿಗಣಿಸಲಾಗಿದೆ.

ರವಿವಾರ ರಾತ್ರಿಯವರೆಗೆ ವಿಶ್ವಾದ್ಯಂತ 1.25 ಮಿಲಿಯನ್ ಕೊರೋನ ವೈರಸ್ ಪ್ರಕರಣಗಳು ದಾಖಲಾಗಿದ್ದು,68,000 ಜನರು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News