ಅಮೆರಿಕ: ಒಂದೇ ದಿನದಲ್ಲಿ 600 ಬಲಿ

Update: 2020-04-06 17:16 GMT

ವಾಶಿಂಗ್ಟನ್, ಎ.6: ಕೊರೋನ ವೈರಸ್ ಸೋಂಕಿನಿಂದ ತತ್ತರಿಸಿರುವ ಅಮೆರಿಕಕ್ಕೆ ಈ ವಾರ ಅತ್ಯಂತ ನಿರ್ಣಾಯಕವೆಂದು ಟ್ರಂಪ್ ಆಡಳಿತದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ನ್ಯೂಯಾರ್ಕ್,ಮಿಶಿಗನ್ ಹಾಗೂ ಲೂಸಿಯಾನಾ ರಾಜ್ಯಗಳಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಇತರ ರಾಜ್ಯಗಳಲ್ಲಿ ಸೋಂಕು ಹರಡು ಸಾಧ್ಯತೆಯಿದೆಯೆಂದು ಭೀತಿ ವ್ಯಕ್ತಪಡಿಸಿದ್ದಾರೆ.

 ಆದಾಗ್ಯೂ, ನ್ಯೂಯಾರ್ಕ್‌ನಲ್ಲಿ ಕಳೆದ ವಾರಕ್ಕಿಂತ ಇದೇ ಮೊದಲ ಬಾರಿಗೆ ಸಾವಿನ ಸಂಖ್ಯೆಯಲ್ಲಿ ರವಿವಾರ ಇಳಿಕೆಯಾಗಿದೆ. ಆದಾಗ್ಯೂರವಿವಾರ 600 ಮಂದಿ ಸಾವನ್ನಪ್ಪಿದ್ದು, 7300ಕ್ಕೂ ಅಧಿಕ ಹೊಸ ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಈ ಮಧ್ಯೆ ಪೆನ್ಸಿಲ್ವೆನಿಯಾ, ಕೊಲೆರೊಡ ಹಾಗೂ ವಾಶಿಂಗ್ಟನ್‌ಗಳಲ್ಲಿಯೂ ಕೊರೋನಾದಿಂದ ಮೃತರಾದವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.

  ಇವೆಲ್ಲದರ ಹೊರತಾಗಿಯೂ ಅಮೆರಿಕದಲ್ಲಿ ಸೋಂಕು ವ್ಯಾಪಕವಾಗಿರುವ ಅರ್ಕನ್ಸಾಸ್, ಇಯೊವಾ, ನೆಬ್ರಾಸ್ಕ ಸೇರಿದಂತೆ ಎಂಟು ರಾಜ್ಯಗಳ ಗವರ್ನರ್‌ಗಳು ಲಾಕ್‌ಡೌನ್ ಆದೇಶವನ್ನು ಹೊರಡಿಸುವಲ್ಲಿ ಇನ್ನೂ ಹಿಂದೇಟು ಹಾಕುತ್ತಿದ್ದಾರೆ. ಈ ಮಧ್ಯೆ ಕೆಲವು ಚರ್ಚ್‌ಗಳು ಸರಕಾರದ ಆದೇಶವನ್ನು ಉಲ್ಲಂಘಿಸಿ, ರವಿವಾರ ಪಾಮ್‌ಸಂಡೆ ಪ್ರಾರ್ಥನಾ ಸಭೆಗಳನ್ನು ನಡೆಸಿರುವುದಾಗಿ ತಿಳಿದುಬಂದಿದೆ.

ಅಮೆರಿಕದಲ್ಲಿ ಒಟ್ಟು 3.35 ಲಕ್ಷ ಮಂದಿ ಕೊರೋನ ಪೀಡಿತರಾಗಿದ್ದು, 9500ಕ್ಕೂ ಅಧಿಕ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News