ಕೊರೊನ ವಿರುದ್ಧದ ಹೋರಾಟದಲ್ಲಿ ಬಳಲಿ ಕೈಚೆಲ್ಲುವ ಪ್ರಶ್ನೆಯೇ ಇಲ್ಲ: ಪ್ರಧಾನಿ ಮೋದಿ

Update: 2020-04-06 18:03 GMT

ಹೊಸದಿಲ್ಲಿ, ಎ.6: ಲಾಕ್‌ಡೌನ್ ಅವಧಿಯಲ್ಲಿ ಜನತೆ ಅಭೂತಪೂರ್ವ ಪ್ರೌಢತೆ ಮತ್ತು ಗಾಂಭೀರ್ಯದಿಂದ ವರ್ತಿಸಿದ್ದಾರೆ. ಕೊರೋನ ವೈರಸ್ ವಿರುದ್ಧದ ಹೋರಾಟ ಸುದೀರ್ಘವಾಗಿದೆ. ನಾವು ಬಳಲಿ ಕೈಚೆಲ್ಲುವ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷದ 40ನೇ ಸ್ಥಾಪನಾ ದಿನಾಚರಣೆಯ ಸಂದರ್ಭ ವೀಡಿಯೊ ಕಾನ್ಫರೆನ್ಸ್ ಮೂಲಕ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮೋದಿ, ದೇಶದ ಜನತೆ ರವಿವಾರ ರಾತ್ರಿ ದೀಪ ಬೆಳಗಿಸುವ ಮೂಲಕ ತಮ್ಮ ಸಾಮೂಹಿಕ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಈಗ ಕೊರೋನ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ವಿಜಯಿಯಾಗಿ ಹೊರಹೊಮ್ಮುವುದು ನಮ್ಮ ಧ್ಯೇಯ ಮತ್ತು ಸಂಕಲ್ಪವಾಗಿದೆ ಎಂದರು.

ದೇಶದಲ್ಲಿ ಯಾವೊಬ್ಬ ಬಡವರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಅವರು, ಯುದ್ಧದಷ್ಟೇ ಗಂಭೀರವಾದ ಕೊರೋನ ವಿರುದ್ಧದ ಹೋರಾಟಕ್ಕೆ ನೆರವಾಗಲು ಕಾರ್ಯಕರ್ತರು ಪಿಎಂ-ಕೇರ್ಸ್‌ ನಿಧಿಗೆ ದೇಣಿಗೆ ನೀಡಬೇಕು ಮತ್ತು ದೇಣಿಗೆ ನೀಡಲು ಇತರರನ್ನೂ ಪ್ರೋತ್ಸಾಹಿಸಬೇಕು. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ವಯಂ ಸುರಕ್ಷಿತರಾಗಿರುವ ಜೊತೆಗೆ ಇತರರೂ ಸುರಕ್ಷಿತರಾಗಿರುವಂತೆ ನೋಡಿಕೊಳ್ಳಬೇಕು ಪಕ್ಷಾಧ್ಯಕ್ಷ ಜೆಪಿ ನಡ್ಡ ನೀಡಿರುವ ಮಾರ್ಗದರ್ಶಿ ಸೂತ್ರವನ್ನು ಪ್ರತಿಯೊಬ್ಬ ಕಾರ್ಯಕರ್ತರೂ ಪಾಲಿಸಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News