ಪಿಲಿಕುಳ ನಿಸರ್ಗಧಾಮದ ಪ್ರಾಣಿಗಳಿಗೂ ತಟ್ಟಿದ ಲಾಕ್‌ಡೌನ್ ಬಿಸಿ!

Update: 2020-04-07 07:38 GMT

ಮಂಗಳೂರು, ಎ.7: ಕೊರೋನ ಭೀತಿಯ ಹಿನ್ನೆಲೆಯಲ್ಲಿ ಹೇರಲಾಗಿರುವ ಲಾಕ್‌ಡೌನ್ ಬಸಿ ಇದೀಗ ಪಿಲಿಕುಳದ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನವನದ ಪ್ರಾಣಿಗಳಿಗೂ ತಟ್ಟಿದೆ. ಇಲ್ಲಿನ ಪ್ರಾಣಿಗಳ ಮಾಂಸಾಹಾರಕ್ಕೂ ಕೊರತೆ ಉಂಟಾಗಿದೆ. ಮಾಂಸ ಸಿಗದ ಕಾರಣ ಸದ್ಯ ಪ್ರಾಣಿಗಳಿಗೆ ಕೋಳಿ ಮಾಂಸವನ್ನು ಹಾಕಲಾಗುತ್ತಿದೆ. ಆದರೆ, ಆರೋಗ್ಯದ ಹಿತದೃಷ್ಟಿಯಿಂದ ಹುಲಿ, ಸಿಂಹ, ಚಿರತೆಗಳಿಗೆ ಮಾಂಸದ ಬದಲು ಕೋಳಿ ಮಾಂಸ ನೀಡುವುದು ಸರಿಯಲ್ಲ ಎಂದೂ ಹೇಳಲಾಗುತ್ತದೆ.

ಪಿಲಿಕುಳದ ಉದ್ಯಾನವನದಲ್ಲಿ ಸುಮಾರು 100ಕ್ಕೂ ಅಧಿಕ ಜಾತಿಯ 1200ರಷ್ಟು ಪ್ರಾಣಿ-ಪಕ್ಷಿಗಳಿವೆ. ಇದರಲ್ಲಿ 13 ಹುಲಿ, 4 ಸಿಂಹ, 12 ಚಿರತೆ, 2 ಕರಡಿ, ಕಾಡುಬೆಕ್ಕು, ಚಿರತೆ ಬೆಕ್ಕು ಸೇರಿದಂತೆ ಹಲವು ಮಾಂಸಾಹಾರಿ ಪ್ರಾಣಿಗಳಿವೆ. ನಿತ್ಯ ಇವುಗಳಿಗೆ ಸುಮಾರು 150 ಕೆಜಿಗಿಂತಲೂ ಅಧಿಕ ವಿವಿಧ ರೀತಿಯ ಮಾಂಸ, ಸುಮಾರು 50 ಕೆಜಿ ಕೋಳಿ ಮಾಂಸ ಅಗತ್ಯವಿದೆ. ಇದರಲ್ಲಿ ಪ್ರತೀ ಹುಲಿಗೆ ದಿನಕ್ಕೆ 8ರಿಂದ 10 ಕಿಲೋ ಮಾಂಸ ಅಗತ್ಯವಿದೆ. ಇದನ್ನು ಪ್ರತೀದಿನ ಪಿಲಿಕುಳ ಆಡಳಿತ ಮಂಡಳಿಯು ಟೆಂಡರ್ ಮೂಲಕ ಖರೀದಿಸುತ್ತಿತ್ತು. ಆದರೆ ಸದ್ಯ ಮಾಂಸದ ಕೊರತೆ ಇರುವ ಕಾರಣ, ಕೋಳಿ ಮಾಂಸವನ್ನು ನೀಡಲಾಗುತ್ತಿದೆ. ಹೊರಜಿಲ್ಲೆಗಳ ಕೋಳಿಗಳಲ್ಲಿ ಹಕ್ಕಿಜ್ವರ ಇತ್ತು ಎಂಬ ಕಾರಣದಿಂದ ಅದನ್ನು ನಿಲ್ಲಿಸಲಾಗಿದೆ. ಸದ್ಯ ಸ್ಥಳೀಯವಾಗಿ ಸುಮಾರು 150ಕ್ಕೂ ಅಧಿಕ ಕೆಜಿ ಕೋಳಿ ಮಾಂಸವನ್ನೇ ಪ್ರಾಣಿಗಳಿಗೆ ಹಾಕಲಾಗುತ್ತಿದೆ. ಸಸ್ಯಹಾರ ಸ್ವೀಕರಿಸುವ ಪ್ರಾಣಿಗಳ ಆಹಾರಕ್ಕೆ ಸದ್ಯ ಸಮಸ್ಯೆ ಇಲ್ಲ. 5 ಎಕರೆ ಜಾಗದಲ್ಲಿ ಹುಲ್ಲು ಬೆಳೆದಿರುವ ಕಾರಣದಿಂದ ಹಾಗೂ ಸಸ್ಯಾಹಾರಿಗಳು ತಿನ್ನುವ ಆಹಾರ ಲಭಿಸುತ್ತಿದೆ.

ಪಿಲಿಕುಳದ ಬಹುತೇಕ ವಿಭಾಗಗಳು ಹಾಗೂ ಮೃಗಾಲಯಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಬಂದ್ ಆಗಿವೆ. ಆದರೆ, ಮೃಗಾಲಯದಲ್ಲಿರುವ ಪ್ರಾಣಿಗಳ ಉಪಚಾರಕ್ಕಾಗಿ ನಿತ್ಯ 20ಕ್ಕೂ ಅಧಿಕ ಸಿಬಂದಿ, ವೈದ್ಯರು ನಿತ್ಯ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಮಾಡಲಾಗಿದೆ.

ಪಿಲಿಕುಳದಲ್ಲಿ ಸುಮಾರು 300ರಷ್ಟು ಹಕ್ಕಿಗಳಿವೆ. ಇವುಗಳಲ್ಲಿ ಹಲವು ಹಕ್ಕಿಗಳಿಗೆ ಮೀನು ಅಗತ್ಯವಿದೆ. ಆದರೆ, ಸದ್ಯ ಮಂಗಳೂರು ಬಂದರಿನಿಂದ ಮೀನು ಕೂಡ ಲಭ್ಯವಾಗದೆ ಹಕ್ಕಿಗಳಿಗೆ ತೊಂದರೆಯಾಗಿದೆ. ಈಗಾಗಲೇ ತರಿಸಲಾಗಿರುವ ಮೀನು ಮುಂದಿನ 4-5 ದಿನಕ್ಕೆ ಸಾಕಾಗಬಹುದು. ಮುಂದೇನು ಮಾಡುವುದು ಎಂಬ ಚಿಂತೆ ಆಡಳಿತ ಮಂಡಳಿಯದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News