ಸಪ್ತಪದಿ- ಸರಳ ಸಾಮೂಹಿಕ ವಿವಾಹ ಮುಂದೂಡಿಕೆ

Update: 2020-04-07 10:50 GMT

ಮಂಗಳೂರು, ಎ.7: ಕರ್ನಾಟಕ ಸರಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಮಹತ್ವಾಕಾಂಕ್ಷೆಯ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಎ.26ರಂದು ನಡೆಯಬೇಕಿದ್ದ ಪ್ರಥಮ ಹಂತದ ಸಾಮೂಹಿಕ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ರಾಜ್ಯದಲ್ಲಿನ ಸುಮಾರು 100ಕ್ಕೂ ಅಧಿಕ ‘ಎ’ ದರ್ಜೆಯ ದೇವಸ್ಥಾನ ಮತ್ತು ಇತರ ಆಯ್ದ ಇಲಾಖೆಯ ದೇವಸ್ಥಾನಗಳಲ್ಲಿ ಸುಮಾರು 4500ಕ್ಕೂ ಹೆಚ್ಚು ಅರ್ಜಿಗಳನ್ನು ಈ ಕಾರ್ಯಕ್ರಮಕ್ಕಾಗಿ ಪಡೆಯಲಾಗಿತ್ತು. ಸುಮಾರು 2000ದಷ್ಟು ಅರ್ಜಿಗಳು ಅಧಿಕೃತ ದಾಖಲೆಯೊಂದಿಗೆ ಬಂದಿದ್ದು, 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಈ ಬಗ್ಗೆ ಸಭೆಗಳು ನಡೆದಿದ್ದು, ರಾಜ್ಯಾದ್ಯಂತ ಸಪ್ತಪದಿ ರಥಗಳು ಕಾರ್ಯಕ್ರಮದ ಪ್ರಚಾರ ನಡೆಸಿದ್ದವು. ಇದರೊಂದಿಗೆ ಪ್ರಥಮ ಹಂತದ ಕಾರ್ಯಕ್ರಮಕ್ಕೆ ಇಲಾಖೆ ಸಿದ್ಧತೆ ನಡೆಸಿತ್ತು. ಆದರೆ ಇಂದು ಬೆಳಗ್ಗೆ ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಜತೆ ಚರ್ಚಿಸಿದ ನಂತರ ಎ.26ರಂದು ನಿಗದಿಯಾಗಿದ್ದ ಕಾರ್ಯಕ್ರಮವನ್ನು ಎರಡನೇ ಹಂತದ ಮೇ 24ರಂದು ಜೋಡಿಸಿಕೊಳ್ಳುವ ಕುರಿತು ನಿರ್ಣಯಿಸಲಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ದಿನಾಂಕ ಪ್ರಕಟಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News