ಹಣ್ಣು ತರಕಾರಿ ಸಗಟು ವ್ಯಾಪಾರ: ಕೊನೆಗೂ ಎಪಿಎಂಸಿಗೆ ಸ್ಥಳಾಂತರಕ್ಕೆ ವ್ಯಾಪಾರಸ್ಥರ ಸಮ್ಮತಿ

Update: 2020-04-07 11:22 GMT

ಮಂಗಳೂರು, ಎ.7: ಕೊರೋನ ಸೋಂಕು ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳ ಗೊಂದಲದ ಬಳಿಕ ಕೊನೆಗೂ ಹಣ್ಣು ಮತ್ತು ತರಕಾರಿ ಸಗಟು ವ್ಯಾಪಾರಸ್ಥರು ತಮ್ಮ ವ್ಯವಹಾರವನ್ನು ಬೈಕಂಪಾಡಿಯ ಎಪಿಎಂಸಿಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ.

ಸಂಸದ ನಳಿನ್ ಕುಮಾರ್ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಅವರ ಮನವಿ ಮೇರೆಗೆ ಸದ್ಯದ ತುರ್ತು ಪರಿಸ್ಥಿತಿಯಲ್ಲಿ ಹಣ್ಣು ತರಕಾರಿ ಸಗಟು ವ್ಯಾಪಾರವನ್ನು ಎಪಿಎಂಸಿಗೆ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ. ಇದೇ ವೇಳೆ ಇಂದು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರ ಜತೆ ಎಪಿಎಂಸಿಗೆ ಭೇಟಿ ನೀಡಿದ್ದು, ಸಂಪೂರ್ಣ ಸಹಕಾರದ ಭರವಸೆ ನೀಡಿದ್ದಾರೆ ಎಂದು ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ ತಿಳಿಸಿದ್ದಾರೆ.

ಸಂಸದರು ಹಾಗೂ ಶಾಸಕರ ಜತೆಗಿನ ಇಂದು ನಡೆದ ಸಭೆಯಲ್ಲಿ ಸಗಟು ವ್ಯಾಪಾರವನ್ನು ಎಪಿಎಂಸಿಗೆ ಸ್ಥಳಾಂತರಿಸಲು ವ್ಯಾಪಾರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಹಾಗಾಗಿ ನಾಳೆಯಿಂದ ಬಹುತೇಕ ಹಣ್ಣು ತರಕಾರಿಯ ಸಗಟು ವ್ಯಾಪಾರ ವ್ಯವಹಾರ ಎಪಿಎಂಸಿಯಲ್ಲಿ ನಡೆಯುವುದು ಖಚಿತವಾಗಿದೆ. ಅಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಾಗಿಯೂ ಶಾಸಕರು ಹಾಗೂ ಸಂಸದರು ತಿಳಿಸಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜನಾರ್ದನ ಸಾಲಿಯಾನ್ ತಿಳಿಸಿದ್ದಾರೆ.

ಎಪಿಎಂಸಿಯಲ್ಲಿಯೇ ತರಕಾರಿ- ಹಣ್ಣು ಖರೀದಿಗೆ ಸೂಚನೆ

ನಗರ ಪಾಲಿಕೆ ವ್ಯಾಪ್ತಿಯೊಳಗಿನ ಉದ್ದಿಮೆ ಪರವಾನಿಗೆ ಹೊಂದಿರುವ ಎಲ್ಲಾ ತರಕಾರಿ ಮತ್ತು ಹಣ್ಣು ಹಂಪಲು ಚಿಲ್ಲರೆ ವ್ಯಾಪಾರಸ್ಥರು ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ನಲ್ಲಿ ತೆರೆದಿರುವ ಹಾಪ್‌ಕಾಮ್ಸ್‌ನಲ್ಲಿ ಅಥವಾ ಇತರ ಸಗಟು ವ್ಯಾಪಾರಿಗಳಿಂದ ಮಾತ್ರವೇ ತರಕಾರಿ ಮತ್ತು ಹಣ್ಣು ಹಂಪಲು ಖರೀದಿಸಬೇಕು ಎಂದು ಮನಪಾ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಸೂಚನೆ ನೀಡಿದ್ದಾರೆ.

ಉಳಿದ ಕಡೆ ಚಿಲ್ಲರೆ ವ್ಯಾಪಾರಸ್ಥರು ಖರೀದಿ ಮಾಡಿದ್ದಲ್ಲಿ ಅದನ್ನು ಅನಧಿಕೃತವೆಂದು ಪರಿಗಣಿಸಲಾಗುವುದು ಹಾಗೂ ಈ ಬಗ್ಗೆ ಪಾಲಿಕೆ ವತಿಯಿಂದ ನಡೆಸುವ ತಪಾಸಣೆ ಸಂದರ್ಭ ಎಪಿಎಂಸಿ ಯಾರ್ಡ್‌ನಿಂದ ಖರೀದಿಸಿರುವ ರಶೀದಿಯನ್ನು ಹಾಗೂ ನಿಗದಿತ ವಸ್ತುಗಳ ದಾಸ್ತಾನು ವಹಿಯನ್ನು ಹಾಜರುಪಡಿಸಬೇಕು. ಈ ನಿರ್ದೇಶನ ಉಲ್ಲಂಘಿಸಿದರೆ ಪಾಲಿಕೆ ವತಿಯಿಂದ ನೀಡಲಾಗಿರುವ ಉದ್ದಿಮೆ ಪರವಾನಿಗೆಯನ್ನು ಶಾಶ್ವತ ವಾಗಿ ರದ್ದುಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಸಾರ್ವಜನಿಕರಿಗೆ ಸರಕಾರ ನಿಗದಿಪಡಿಸಿರುವ ದರದಲ್ಲಿಯೇ ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪಾಲಿಕೆಯಿಂದ ನಿಗಾ ವಹಿಸಲಾಗುವುದು. ಜಿಲ್ಲಾಡಳಿತದ ವತಿಯಿಂದ ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಚಿಸಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ. ಜಿಲ್ಲೆಯ ನಾಗರಿಕರ ಸ್ವಚ್ಛತೆ, ಆರೋಗ್ಯ ರಕ್ಷಣೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹಣ್ಣು ತರಕಾರಿಗಳ ಖರೀದಿ ಪ್ರಮಾಣದ ಬಗ್ಗೆ ವ್ಯತ್ಯಾಸ/ ಕೋರಿಕೆಗಳಿದ್ದಲ್ಲಿ ಈ ಕೆಳಗಿನವರ ದೂರವಾಣಿ ಮೂಲಕ ಸಂಪರ್ಕಿಸಬಹುದು.

ಪ್ರವೀಣ್, ಸಹಾಯಕ ನಿರ್ದೇಶಕರು ತೋಟಗಾರಿಕೆ: 9449258204., ಎಚ್.ಆರ್. ನಾಯಕ್, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ- 9448999226

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News