ಉಡುಪಿ: ಮಂಗಳವಾರ ಮತ್ತೆ 6 ಮಂದಿ ಐಸೋಲೇಷನ್ ವಾರ್ಡ್‌ಗೆ

Update: 2020-04-07 13:09 GMT

ಉಡುಪಿ, ಎ.6: ಶಂಕಿತ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿನ ಪರೀಕ್ಷೆಗಾಗಿ ಮಂಗಳವಾರ ಒಟ್ಟು ಆರು ಮಂದಿ ವಿವಿಧ ಆಸ್ಪತ್ರೆಗಳ ಐಸೋಲೇಷನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ ನಾಲ್ವರು ಪುರುಷರು ಕೋವಿಡ್ ಶಂಕಿತರಾಗಿದ್ದರೆ, ಇಬ್ಬರು ಉಸಿರಾಟದ ತೊಂದರೆಗಳಿಗಾಗಿ ಆಸ್ಪತ್ರೆಗೆ ಬಂದಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಒಟ್ಟು 19 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇವರಲ್ಲಿ ಶಂಕಿತ ಕೋವಿಡ್-19ರ ಸೋಂಕಿಗಾಗಿ ಆರು ಮಂದಿ, ಶಂಕಿತರ ಸಂಪರ್ಕಕ್ಕಾಗಿ 11 ಮಂದಿ ಅಲ್ಲದೇ ಉಸಿರಾಟದ ತೊಂದರೆ ಎದುರಿಸುತ್ತಿರುವ ಇಬ್ಬರ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಈ ವರದಿ ಒಂದೆರಡು ದಿನಗಳಲ್ಲಿ ಕೈಸೇರುವ ನಿರೀಕ್ಷೆ ಇದೆ ಎಂದು ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಮಂಗಳವಾರ ಯಾರೊಬ್ಬರ ಸ್ಯಾಂಪಲ್ ವರದಿಯೂ ಬಂದಿಲ್ಲ. ಇದರಿಂದ ನಿನ್ನೆಯವರೆಗೆ ಬರಬೇಕಾಗಿದ್ದ 45 ಮಂದಿಯ ಸ್ಯಾಂಪಲ್‌ಗಳ ವರದಿಯೊಂದಿಗೆ ಇಂದು ಕಳುಹಿಸಿದ 19 ಮಂದಿಯ ಸ್ಯಾಂಪಲ್‌ಗಳು ಸೇರಿ ಒಟ್ಟು 64 ಮಂದಿಯ ವರದಿ ಬರಲು ಬಾಕಿ ಇದೆ ಎಂದು ಡಾ.ಸೂಡ ತಿಳಿಸಿದರು.

ಈ ಮೂಲಕ ಇದುವರೆಗೆ ಜಿಲ್ಲೆಯಿಂದ ಕಳುಹಿಸಿದ 288 ಮಂದಿಯ ಸ್ಯಾಂಪಲ್‌ಗಳಲ್ಲಿ 221 ಮಂದಿಯ ವರದಿ ನೆಗೆಟಿವ್ ಆಗಿ ಬಂದಿದ್ದರೆ, ಮೂವರದ್ದು ಮಾತ್ರ ಪಾಸಿಟಿವ್ ಆಗಿದೆ ಎಂದವರು ವಿವರಿಸಿದರು.

ಜಿಲ್ಲೆಯಲ್ಲಿ ಮಂಗಳವಾರ 34 ಮಂದಿ ಕೋವಿಡ್-19ರ ತಪಾಸಣೆಗಾಗಿ ನೋಂದಣಿಗೊಂಡಿದ್ದಾರೆ. ಈ ಮೂಲಕ ಇದುವರೆಗೆ ಒಟ್ಟು 2030 ಮಂದಿ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ ಇಂದು 490 (ಇಂದು 87) ಮಂದಿ 28 ದಿನಗಳ ನಿಗಾ ಪೂರೈಸಿದ್ದರೆ, 1793 (213) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ. ಒಟ್ಟು 149 ಮಂದಿ ಹೋಮ್ ಕ್ವಾರಂಟೈನ್ ಹಾಗೂ 67 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ. ಇಂದು ಇಬ್ಬರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಒಟ್ಟು 145 ಮಂದಿ ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದಾರೆ ಎಂದು ಡಾ. ಸುಧೀರ್‌ ಚಂದ್ರ ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News