‘ಕೋವಿಡ್-19 ಚಾಲೆಂಜ್’ ಎಂಐಟಿ ತಂಡ ಚಾಂಪಿಯನ್

Update: 2020-04-07 13:14 GMT
ಅಕ್ಷತಾ, ಶುಭಂ, ಅದ್ರಿ

ಉಡುಪಿ, ಎ.7: ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾನಿಲಯ ಮಾಸ್ಸುಚೆಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, (ಎಂಐಟಿ) ವಿಶ್ವವಿಡೀ ಬೃಹತ್ ಸಮಸ್ಯೆ ಯಾಗಿ ಕಾಡುತ್ತಿರುವ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ಎದುರಿಸುವ ಪರಿಹಾರವೊಂದನ್ನು ಸೂಚಿಸಲು ಎ.4ರಂದು ಆಯೋಜಿಸಿದ್ದ ‘ಎಂಐಟಿ ಕೋವಿಡ್-19 ಚಾಲೆಂಜ್’ ಸ್ಪರ್ಧೆಯಲ್ಲಿ ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

 ಈ ಹ್ಯಾಕಥಾನ್ ಸ್ಪರ್ಧೆ ಎ.4ರ ಅಪರಾಹ್ನ ಪ್ರಾರಂಭಗೊಂಡಿತ್ತು. ಇದರಲ್ಲಿ ಭಾಗವಹಿಸುವ ತಂಡ ಸಾಂಕ್ರಾಮಿಕ ರೋಗದ ಸಮಸ್ಯೆಗಳನ್ನು ಪಟ್ಟಿಮಾಡಿ, ಅವುಗಳಿಗೆ ಸಾಮಾನ್ಯವಾದ ಪರಿಹಾರವನ್ನು ಸೂಚಿಸಬೇಕಿತ್ತು. ಇದರಲ್ಲಿ ವಿಶ್ವದ 75ಕ್ಕೂ ಅಧಿಕ ದೇಶಳ 1500ಕ್ಕೂ ಅಧಿಕ ಸ್ಪರ್ಧಿಗಳು ಹಾಗೂ 250ಕ್ಕೂ ಅಧಿಕ ಮಾರ್ಗದರ್ಶಕ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.

ಸ್ಪರ್ಧೆಯಲ್ಲಿ ಮಣಿಪಾಲ ಎಂಐಟಿ ತಂಡವನ್ನು ಅಕ್ಷತಾ ಕಾಮತ್ (ಸಿಎಸ್‌ಇ) , ಶುಭಂ ರಟೇರಿಯಾ(ಸಿಸಿಇ) ಹಾಗೂ ಅದ್ರಿ ರಾಜಾರಾಮನ್ (ಇಸಿಇ) ಅವರು ಪ್ರತಿನಿಧಿಸಿದ್ದರು. ಪ್ರಾರಂಭದಲ್ಲಿ ಇವರು ಸಾಂಕ್ರಾಮಿಕ ರೋಗವನ್ನು ಎದುರಿಸಲು ತಮ್ಮ ಆಲೋಚನೆಗಳನ್ನು ಪ್ರಸ್ತುತ ಪಡಿಸಿದ್ದರು. ಬಳಿಕ ಅವರು ವಿವಿಧ ವಿಷಯಗಳ ತಜ್ಞರಾದ ವಾಷಿಂಗ್‌ಟನ್ ಡಿಸಿಯ ಮೆಲಿಯಾ ವಾಟ್ಸನ್, ತೈವಾನ್‌ನ ಹಾಸ್ಸಿಯಾಂಗ್ ವಾಯ್ ಹು ಹಾಗೂ ಬ್ರಿಟನ್‌ನ ಮಾರಿಯಾನೆ ಮೆಲೋ ಅವರೊಂದಿಗೆ ಸೇರಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಚರ್ಚೆಯ ಕೊನೆಯಲ್ಲಿ ಅವರು ರೋಗ ಹರಡಲು ಪ್ರಮುಖ ಕಾರಣ, ಆಸ್ಪತ್ರೆಯಲ್ಲಿ ತುಂಬಿತುಳುಕುವ ರೋಗಿಗಳು, 50 ವರ್ಷದೊಳಗಿನ ರೋಗಿಗಳಲ್ಲಿ ಸರಾಸರಿ ಶೇ.5ರಷ್ಟು ಮಂದಿಗೆ ಮಾತ್ರ ಆಸ್ಪತ್ರೆಗೆ ದಾಖಲಿಸುವ ಅನಿವಾರ್ಯತೆ ಇರುವಾಗ ಕಂಡುಬರುವ ಅಸಮಂಜಸ ಅಡ್ಮಿಷನ್ ಆಗಿದೆ ಎಂಬುದನ್ನು ತಂಡ ಮನದಟ್ಟು ಮಾಡಿತು.

ಇದಕ್ಕೆ ಪರಿಹಾರವಾಗಿ ತಂಡ ಸೂಚಿಸಿದ್ದು, ಟೆಲಿಹೆಲ್ತ್ ಪ್ಲಾಟ್‌ಫಾರಂ ಒಂದನ್ನು ನಿರ್ಮಿಸುವುದು. ಹಾಗೂ ಇದರ ಮೂಲಕ ಪೋನ್ ಕೆಮರಾಗಳನ್ನು ಅಥವಾ ಮನೆಯಲ್ಲಿರುವ ವೆಬ್‌ಕ್ಯಾಮ್‌ಗಳನ್ನು ಬಳಸಿ ಜನರ ಹೃದಯ ಬಡಿತ, ಉಸಿರಾಟದ ಪ್ರಮಾಣ, ರಕ್ತದಲ್ಲಿ ಆಮ್ಲಜನಕದ ಕೇಂದ್ರೀಕರಣಗಳ್ನು ಅವಲೋಕಿಸುವ ಕ್ರಮವನ್ನು ಹ್ಯಾಕಥಾನ್‌ನ ಉದ್ದಕ್ಕೂ ಅಮೆರಿಕದಲ್ಲಿರುವ ಬಹಳಷ್ಟು ತಜ್ಞರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಇದರಲ್ಲಿ ಮತ್ತಷ್ಟು ಸುಧಾರಣೆಗೆ ಸಲಹೆಗಳನ್ನು ನೀಡಿದರು. ಮರುದಿನ ಮಣಿಪಾಲ ತಂಡದ ಪ್ರಸ್ತಾಪದ ಕುರಿತು ತೀರ್ಪುಗಾರರ ಪ್ರಶ್ನೆಗಳಿಗೆ, ಸಂಶಯಗಳಿಗೆ ತಂಡದ ಸದಸ್ಯರು ಉತ್ತರಿಸಿದರು. ಅಂತಿಮವಾಗಿ ‘ಯಾರನ್ನು ಪರೀಕ್ಷಿಸಬೇಕು ಹಾಗೂ ಯಾವಾಗ’ ಎಂಬ ಪ್ರಸ್ತಾಪ ಮಂಡಿಸಿದ ಮಣಿಪಾಲ ತಂಡವನ್ನು ವಿಜಯಿ ತಂಡವೆಂದು ಘೋಷಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News