ಕೊರೋನ ವೈರಸ್ ನಡುವೆ ಕೋಮು ಪ್ರಚೋದಕ ಭಿತ್ತಿಪತ್ರ : ಕಠಿಣ ಕ್ರಮದ ನಿರೀಕ್ಷೆಯಲ್ಲಿ ಜನತೆ

Update: 2020-04-07 15:09 GMT

ಮಂಗಳೂರು, ಎ. 7: ನಗರ ಮತ್ತು ಹೊರವಲಯದ ಕೆಲವು ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ನಿರ್ದಿಷ್ಟ ಸಮುದಾಯದ ವ್ಯಾಪಾರಿಗಳಿಗೆ ‘ಕೊರೋನ ಸಂಪೂರ್ಣ ಗುಣಮುಖವಾಗುವವರೆಗೆ ನಮ್ಮೂರಿಗೆ ಪ್ರವೇಶವಿಲ್ಲ’ ಎಂಬ ಕೋಮು ಪ್ರಚೋದನಾಕಾರಿ ಭಿತ್ತಿ ಪತ್ರವನ್ನು ಹಾಕಲಾಗುತ್ತಿದ್ದರೂ ಕೂಡ ದ.ಕ.ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಜನಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಅಲ್ಲದೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವ ಅವಕಾಶವಿದ್ದರೂ ಕೂಡ ಪೊಲೀಸ್ ಇಲಾಖೆ ಕೇವಲ ಎಚ್ಚರಿಕೆ ನೀಡಿ ಸುಮ್ಮನಾಗಿದೆ ಮತ್ತು ಜಿಲ್ಲೆಯ ಸಚಿವರು, ಸಂಸದರು, ಶಾಸಕರ ಸಹಿತ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಮೌನ ತಾಳಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಮಧ್ಯೆ ಜಿಲ್ಲೆಯ ಶಾಂತಿಪ್ರಿಯ ಜನತೆ ಇಂತಹ ಭಿತ್ತಿಪತ್ರ ಅಳವಡಿಸಿ ಸಮಾಜವನ್ನು ಒಡೆಯುವ ಕೋಮು ಪ್ರಚೋದಕ ಮತ್ತು ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ 2ನೆ ಕೊಲ್ಯ, ತೊಕ್ಕೊಟ್ಟು ಸಮೀಪದ ಕೃಷ್ಣನಗರ ಹಾಗೂ ಕಂಕನಾಡಿ ನಗರ ಠಾಣೆಯ ಪಡೀಲ್ ಸಮೀಪದ ಅಳಪೆ ಪ್ರದೇಶದಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಪ್ರವೇಶವಿಲ್ಲ ಎಂಬ ಭಿತ್ತಿಪತ್ರವನ್ನು ಅಳವಡಿಸಲಾಗಿತ್ತು. ಈ ಬಗ್ಗೆ ‘ವಾರ್ತಾಭಾರತಿ’ಯಲ್ಲಿ ಸುದ್ದಿ ಪ್ರಕಟವಾಗುತ್ತಲೇ ಈ ಭಿತ್ತಿಪತ್ರ ಮಾಯವಾಗಿತ್ತು. ಇದನ್ನು ಸ್ವತಃ ಹಾಕಿದವರೇ ತೆರವುಗೊಳಿಸಿದರೋ ಅಥವಾ ಪೊಲೀಸರು ಹರಿದು ಹಾಕಿದರೋ ಅಥವಾ ಶಾಂತಿಪ್ರಿಯರು ತೆರವುಗೊಳಿಸಿದರೋ ಎಂಬುದು ಸ್ಪಷ್ಟವಿಲ್ಲ. ಆದರೆ ಒಮ್ಮೆ ಮಾಯವಾದ ಭಿತ್ತಿಪತ್ರ ಮತ್ತದೇ ಸ್ಥಳದಲ್ಲಿ ಪ್ರತ್ಯಕ್ಷಗೊಂಡ ಉದಾಹರಣೆಯೂ ಇದೆ. ಇದು ಜಿಲ್ಲಾಡಳಿತಕ್ಕೆ, ಪೊಲೀಸ್ ಇಲಾಖೆಗೆ ಹಾಕಲಾದ ನೇರ ಸವಾಲಾದರೂ ಕೂಡ ಈ ಬಗ್ಗೆ ಇನ್ನೂ ಪೊಲೀಸ್ ಇಲಾಖೆಯು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸದೇ ಇರುವುದು ವಿಪರ್ಯಾಸ.

ಲಾಠಿಪ್ರಹಾರ

ನಗರದ ಅತ್ತಾವರದ ಬಾಬುಗುಡ್ಡೆ, ಪಂಪ್‌ವೆಲ್, ಎಕ್ಕೂರು ಹಾಗೂ ಇತರ ಒಳ ಪ್ರದೇಶಗಳಲ್ಲಿ ತಳ್ಳುಗಾಡಿ, ಟೆಂಪೋದಲ್ಲಿ ಮೀನು, ತರಕಾರಿ, ಹಣ್ಣು ಹಂಪಲು ಇತ್ಯಾದಿಯನ್ನು ಹೇರಿಕೊಂಡು ಮಾರಾಟ ಮಾಡುವವರ ಪೈಕಿ ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಇಲ್ಲೆಲ್ಲಾ ಈ ವ್ಯಾಪಾರಿಗಳಿಗೆ ಪೊಲೀಸ್ ವೇಷ ಧರಿಸಿಕೊಂಡು ಸಂಘಪರಿವಾರದ ಕಾರ್ಯಕರ್ತರು ಎನ್ನಲಾದವರು ಲಾಠಿ ಪ್ರಹಾರ ನಡೆಸುತ್ತಿದ್ದಾರೆ ಎಂದು ಅಳಲು ತೋಡಿಕೊಳ್ಳುತ್ತಿರುವ ವಾಟ್ಸಪ್ ಸಂದೇಶ ಕೂಡ ಹರಿದಾಡುತ್ತಿದೆ. ಇದು ಬಹುತೇಕ ಮುಸ್ಲಿಂ ವ್ಯಾಪಾರಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ಈ ಮಧ್ಯೆ ಮುಖ್ಯಮಂತ್ರಿ ಯಡಿಯೂರಪ್ಪ ಕೊರೋನ ನೆಪದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ಮತ್ತು ದ್ವೇಷ ಬಿತ್ತುವವರ ವಿರುದ್ಧ ಕಠಿಣ ಕ್ರಮ ಗೊಳ್ಳುವುದಾಗಿ ಹೇಳಿದ್ದರೂ ಕೂಡ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಈ ಬಗ್ಗೆ ಮೌನ ತಾಳಿರುವುದು ಅಚ್ಚರಿಗೆ ಕಾರಣವಾಗಿದೆ. ಒಟ್ಟಿನಲ್ಲಿ ಕೊರೋನ ವೈರಸ್ ಭಯದ ಮಧ್ಯೆ ಕೆಲವರು ಸಮಾಜದಲ್ಲಿ ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷದ ಮನೋಭಾವವನ್ನು ಹರಡಲಾಗುತ್ತಿರುವ ಬಗ್ಗೆ ಆತಂಕಗೊಳ್ಳುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News