ಕಾಸರಗೋಡು : 10 ವರ್ಷದ ಬಾಲಕ ಸೇರಿ ನಾಲ್ಕು ಮಂದಿಗೆ ಕೊರೋನ ಸೋಂಕು ದೃಢ

Update: 2020-04-07 15:40 GMT
ಸಾಂದರ್ಭಿಕ ಚಿತ್ರ

ಕಾಸರಗೋಡು : ಮಂಗಳವಾರ ಕೂಡಾ ಜಿಲ್ಲೆಯಲ್ಲಿ ಹತ್ತು ವರ್ಷದ  ಬಾಲಕ ಸೇರಿ ನಾಲ್ಕು ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 155ಕ್ಕೆ ತಲುಪಿದೆ.

ಸೋಂಕಿತರು ಪಳ್ಳಿಕೆರೆ, ಮೊಗ್ರಾಲ್, ಉದುಮ, ಮಧೂರಿನ ವ್ಯಕ್ತಿಗಳಾಗಿದ್ದು , ಓರ್ವ ಮಹಿಳೆ ಹಾಗೂ ಓರ್ವ 10 ವರ್ಷದ ಬಾಲಕ ಒಳಗೊಂಡಿದ್ದಾನೆ.
ಈ ಪೈಕಿ ಇಬ್ಬರು ದುಬೈಯಿಂದ ಬಂದವರಾಗಿದ್ದಾರೆ. ಉಳಿದ ಇಬ್ಬರಿಗೆ ಸೋಂಕಿತರ ಸಂಪರ್ಕದಿಂದ ಬಂದಿದೆ. ಮಂಗಳವಾರ 32 ಸ್ಯಾಂಪಲ್ ಗಳನ್ನು ಕಳುಹಿಸಿಕೊಡಲಾಗಿದೆ. ಸೋಮವಾರ ಜಿಲ್ಲೆಯಲ್ಲಿ ಓರ್ವ ಗುಣಮುಖನಾಗಿದ್ದು, ಇನ್ನೂ 624 ಮಂದಿಯ ವೈದ್ಯಕೀಯ ಪರೀಕ್ಷಾ ವರದಿ ಲಭಿಸಬೇಕಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಕೊರೋನ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಜನರು ಮನೆಯಿಂದ ಹೊರಬರದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ.

ಮೊಗ್ರಾಲ್ ಪುತ್ತೂರು, ಚೆಮ್ನಾಡ್ , ಮಧೂರು , ಉದುಮ , ಪಳ್ಳಿಕೆರೆ , ಚೆಂಗಳ ಹಾಗೂ ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ ಕೋವಿಡ್ ಬಾಧಿತ ವಲಯ ಎಂದು ಘೋಷಿಸಿದ್ದು ,  ಪ್ರದೇಶದವರು ಮನೆಯಿಂದ ಹೊರಬಾರದಂತೆ ಐಜಿಪಿ   ವಿಜಯ್  ಸಾಕರೆ  ತಿಳಿಸಿದ್ದಾರೆ. ಅಗತ್ಯ ವಸ್ತು ಮತ್ತು ಔಷಧಿಗಳನ್ನು ಪೊಲೀಸರೇ  ಮನೆಗಳಿಗೆ ತಲಪಿಸುವರು. ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.

ಆದೇಶ ಉಲ್ಲಂಘಿಸುತ್ತಿದ್ದರೆಂದು ವೀಕ್ಷಿಸಲು ಈ ಪ್ರದೇಶಗಳಲ್ಲಿ ಡ್ರೋನ್ ಕ್ಯಾಮರ ಬಳಸಲಾಗುತ್ತಿದೆ. ಮನೆಯಿಂದ ಹೊರಬಂದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವರು. ವೈರಸ್ ಹರಡುತ್ತಿರುವುದರಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News