ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಮಾತ್ರ ಕೇರಳ-ಕರ್ನಾಟಕದ ‘ತಲಪಾಡಿ’ ಗಡಿ ಪ್ರವೇಶ : ದ.ಕ.ಜಿಲ್ಲಾಧಿಕಾರಿ

Update: 2020-04-07 16:19 GMT
ಸಿಂಧೂ ಬಿ. ರೂಪೇಶ್ 

ಮಂಗಳೂರು, ಎ. 7: ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಕೇರಳ-ಕರ್ನಾಟಕದ ‘ತಲಪಾಡಿ’ ಗಡಿ ಬಂದ್ ಮಾಡಿರುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ನೀಡಿದ ಸೂಚನೆಯ ಮೇರೆಗೆ ಕೆಲವು ಷರತ್ತುಗಳ ಅನ್ವಯ ‘ತುರ್ತು ವೈದ್ಯಕೀಯ ಚಿಕಿತ್ಸೆ’ಯ ಸಲುವಾಗಿ ತಲಪಾಡಿ ಗಡಿಯನ್ನು ತೆರವುಗೊಳಿಸಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಮಟ್ಟದ ಕೋವಿಡ್ ನಿಯಂತ್ರಣ ಸಭೆಯನ್ನು ಐಎಂಎ ಸದಸ್ಯರ ಸಮ್ಮುಖ ನಡೆಸಿ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಕೆಲವು ಮಾನದಂಡಗಳನ್ನು ಪರಿಗಣಿಸಿ ಕೇರಳದ ರೋಗಿಗಳಿಗೆ ಮಂಗಳೂರಿನಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವ ಬಗ್ಗೆ ತೀರ್ಮಾನಿಸಲಾಯಿತು.

ಷರತ್ತುಗಳು

1. ಕೇವಲ ಅತ್ಯಂತ ತುರ್ತು ಚಿಕಿತ್ಸೆ ಮತ್ತು ರಸ್ತೆ ಅಪಘಾತಗಳ ಚಿಕಿತ್ಸೆಗೆ ಸರಕಾರಿ ಆ್ಯಂಬುಲೆನ್ಸ್‌ಗಳಲ್ಲಿ ಮಾತ್ರ ರೋಗಿಯನ್ನು ಕರೆತರಲು ಅನುಮತಿಸಲಾಗುವುದು.
2. ಕಾಸರಗೋಡಿನ ಸ್ಥಳೀಯ ಸರಕಾರಿ ವೈದ್ಯಾಧಿಕಾರಿಯು ಚಿಕಿತ್ಸೆಗೆ ಬರುವ ರೋಗಿಯು ‘ನೋನ್ ಕೋವಿಡ್’ ಎಂದು ಮತ್ತು ಸದರಿ ಚಿಕಿತ್ಸೆಯು ಕಾಸರಗೋಡಿನಲ್ಲಿ ಲಭ್ಯವಿಲ್ಲ ಎಂದು ದೃಢೀಕರಿಸಬೇಕು.
3. ರೋಗಿಯನ್ನು ಕರೆತರುವ ಆ್ಯಂಬುಲೆನ್ಸ್‌ಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನದಂತೆ ಸ್ಯಾನಿಟೈಸ್ ಮಾಡುವುದು.
4. ರೋಗಿಯೊಂದಿಗೆ ಕೇವಲ ಒಬ್ಬ ಸಹಾಯಕ, ಆ್ಯಂಬುಲೆನ್ಸ್ ಚಾಲಕ ಮತ್ತು ಒಬ್ಬ ಪ್ಯಾರಾಮೆಡಿಕಲ್ಸ್‌ರನ್ನು ಮಾತ್ರ ಕರೆತರಲು ಅವಕಾಶ ನೀಡುವುದು.
5. ತಲಪಾಡಿ ಗಡಿಯಲ್ಲಿ ವೈದ್ಯಕೀಯ ತಂಡವನ್ನು ನಿಯೋಜನೆ ಮಾಡಲಾಗಿದ್ದು, ಕಾಸರಗೋಡಿನಿಂದ ಬರುವ ಆ್ಯಂಬುಲೆನ್ಸ್ ಹಾಗೂ ರೋಗಿಯನ್ನು ಪ್ರಥಮ ಹಂತದ ದಾಖಲೆಯನ್ನು ನಿಗದಿತ ಚೆಕ್‌ಲಿಸ್ಟ್‌ನಲ್ಲಿ ಪರಿಶೀಲನೆ ನಡೆಸಿದ ನಂತರ ದ.ಕ.ಜಿಲ್ಲೆಯೊಳಗೆ ಪ್ರವೇಶ ನೀಡುವುದು.
ಈ ಮಾನದಂಡಗಳನ್ನು ಪಾಲಿಸಲು ಈಗಾಗಲೆ ಚೆಕ್‌ಲಿಸ್ಟನ್ನು ರಚಿಸಿ ಕಾಸರಗೋಡು ಜಿಲ್ಲಾಡಳಿತಕ್ಕೆ ಕಳುಹಿಸಿಕೊಡಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News