ಪಡೀಲ್ ಅಳಪೆಯಲ್ಲಿ ಕೋಮು ಪ್ರಚೋದಕ ಭಿತ್ತಿಪತ್ರ: ಮಾಜಿ ಶಾಸಕ ಜೆ.ಆರ್.ಲೋಬೊ ದೂರು

Update: 2020-04-07 15:53 GMT

ಮಂಗಳೂರು, ಎ.7: ನಗರದ ಪಡೀಲ್ ಸಮೀಪದ ಅಳಪೆ ಕಲ್ಕರ್ ಎಂಬಲ್ಲಿ ಕೋಮು ಪ್ರಚೋದಕ ಭಿತ್ತಿಪತ್ರ ಅಳವಡಿಕೆಗೆ ಸಂಬಂಧಿಸಿದಂತೆ ಮಾಜಿ ಶಾಸಕ ಜೆ.ಆರ್.ಲೋಬೊ ಕಂಕನಾಡಿ ನಗರ ಠಾಣೆಗೆ ಮಂಗಳವಾರ ದೂರು ನೀಡಿದ್ದಾರೆ.

ದೂರನ್ನು ಸ್ವೀಕರಿಸಿರುವ ಪೊಲೀಸರು ಮಂಗಳೂರಿನ 7ನೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸಿದ್ದಾರೆ.

‘ನಾಗರಿಕರ ಹಿತದೃಷ್ಟಿಯಿಂದ ಕೊರೋನ ವೈರಸ್ ಸಂಪೂರ್ಣವಾಗಿ ಹೋಗುವವರೆಗೆ ನಮ್ಮ ಊರಿಗೆ ಯಾವುದೇ ಮುಸಲ್ಮಾನ ವ್ಯಾಪಾರಿಗೆ ಪ್ರವೇಶವಿಲ್ಲ’ ಎಂದು ಬರೆಯಲಾದ ಭಿತ್ತಿಪತ್ರವು ಪಡೀಲ್ ಅಳಪೆಯಲ್ಲಿ ಸೋಮವಾರ ಕಂಡು ಬಂದಿತ್ತು. ಬಳಿಕ ಪೊಲೀಸರು ಅದನ್ನು ತೆರವುಗೊಳಿಸಿದ್ದರು. ಆದಾಗ್ಯೂ ಮಂಗಳವಾರ ಈ ಭಿತ್ತಿಪತ್ರ ಪ್ರತ್ಯಕ್ಷಗೊಂಡಿತ್ತು.

ಈ ಮಧ್ಯೆ ಮಾಜಿ ಶಾಸಕ ಜೆ.ಆರ್.ಲೋಬೊ ಕಂಕನಾಡಿ ನಗರ ಠಾಣೆಗೆ ಮಂಗಳವಾರ ದೂರು ಸಲ್ಲಿಸಿದ್ದಾರೆ. ಅಳಪೆ ಕಲ್ಕರ್‌ನಲ್ಲಿ ದುಷ್ಕರ್ಮಿಗಳು ಮುಸ್ಲಿಮರನ್ನು ಬಹಿಷ್ಕರಿಸುವ ಬಗ್ಗೆ ಭಿತ್ತಿಪತ್ರ ಹಾಕಿದ್ದಾರೆ. ಇದರಿಂದ ಹಿಂದೂ-ಮುಸ್ಲಿಮ್ ಮಧ್ಯೆ ವೈಮನಸ್ಸು ಹುಟ್ಟಿಸುವಂತೆ ಮಾಡಿದ್ದಾರೆ. ಇದರ ವಿರುದ್ಧ ಕ್ರಮ ಜರುಗಿಸಿ ಎಂದು ದೂರಿನಲ್ಲಿ ತಿಳಿಸಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News