ಶಬೇ ಬರಾಅತ್, ಗುಡ್ ಫ್ರೈಡೇ ಸಾರ್ವಜನಿಕ ಆಚರಣೆ ನಿಷೇಧ: ಉಡುಪಿ ಡಿಸಿ

Update: 2020-04-07 16:07 GMT

ಉಡುಪಿ, ಎ.7: ಲಾಕ್‌ಡೌನ್ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಮಸೀದಿಗಳಲ್ಲಿ ಶಬೇ ಬರಾಅತ್ ಹಾಗೂ ಚರ್ಚ್‌ಗಳಲ್ಲಿ ಗುಡ್ ಫ್ರೈಡೇ ಆಚರಣೆ ಮಾಡಬಾರದು. ಒಂದು ವೇಳೆ ಆದೇಶ ಉಲ್ಲಂಘಿಸಿ ಆಚರಣೆ ಮಾಡಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಇಂದು ನಡೆದ ವಿವಿಧ ಧಾರ್ಮಿಕ ಮುಖಂಡರ ಶಾಂತಿ ಸಮಿತಿ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಕೊರೋನ ಭೀತಿಯ ಹಿನ್ನೆಲೆಯಲ್ಲಿ ಮಸೀದಿ, ಚರ್ಚ್, ದೇವಳಗಳಲ್ಲಿ ಎಲ್ಲ ರೀತಿಯ ಪ್ರಾರ್ಥನೆಗಳನ್ನು ನಿಷೇಧಿಸಿ ಹೈಕೋರ್ಟ್ ಆದೇಶ ನೀಡಿದೆ. ಆದರೆ ಈ ಮೊದಲೇ ನಮ್ಮಲ್ಲಿ ಎಲ್ಲ ಧಾರ್ಮಿಕ ಕೇಂದ್ರಗಳು ಮುಚ್ಚಿವೆ ಎಂದು ಹೇಳಿದರು. ಇದೀಗ ಶಬೇ ಬರಾಅತ್ ಹಾಗೂ  ಗುಡ್ ಫ್ರೈಡೇ ಆಚರಣೆಗಳು ಒಂದೇ ಸಮಯದಲ್ಲಿ ಬಂದಿದೆ. ಆದುದರಿಂದ ಯಾವುದೇ ಕಾರಣಕ್ಕೂ ಹೊರಗಡೆ ಆಚರಣೆ ಮಾಡುವುದು, ಮೆರವಣಿಗೆ ನಡೆಸುವುದು, ಖಬರ್‌ ಸ್ತಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಕೆಲಸ ಮಾಡಬಾರದು. ಇಡೀ ಸಮುದಾಯ ಸರಕಾರದ ಆದೇಶ ಪಾಲನೆ ಮಾಡುವ ಮೂಲಕ ಇವುಗಳನ್ನು ತಮ್ಮ ಮನೆಗಳಲ್ಲೇ ಆಚರಿಸಬೇಕು. ಕುಟುಂಬದವರು ಸೇರಿ ಆಚರಣೆ ಮಾಡುವಾಗ ಸಾಮಾಜಿಕ ಅಂತರ ಕಾಪಾಡಬೇಕು ಎಂದು ಅವರು ಸೂಚಿಸಿದರು.

ಹುಸೈನ್ ಹೈಕಾಡಿ ಮಾತನಾಡಿ, ಈಗಾಗಲೇ ಶಬೇ ಬರಾಅತ್‌ನ್ನು ಮನೆ ಯಲ್ಲಿಯೇ ಆಚರಣೆ ಮಾಡುವುದಾಗಿ ನಾವು ನಿರ್ಣಯ ಮಾಡಿದ್ದೇವೆ. ಆದರೆ ಕೆಲವೊಂದು ವ್ಯಕ್ತಿಗಳು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ತಪ್ಪು ಮಾಡಿದವರಿಗೆ ಗರಿಷ್ಠ ಶಿಕ್ಷೆ ನೀಡಬೇಕೆಂದು ನಾವು ಕೂಡ ಒತ್ತಾಯಿಸುತ್ತೇವೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಗಳು, ಒಬ್ಬರು ತಪ್ಪು ಮಾಡಿದರೆ ಇಡೀ ಸಮುದಾಯ ವನ್ನು ಹೊಣೆ ಮಾಡು ವುದು ಸರಿಯಲ್ಲ ಎಂಬುದಾಗಿ ಹೇಳಿಕೆಯನ್ನು ನೀಡಿದ್ದಾರೆ. ಅದರಂತೆ ಯಾರು ಕೂಡ ಇಡೀ ಸಮುದಾಯವನ್ನು ದೂಷಣೆ ಮಾಡುವ ಕೆಲಸ ಮಾಡಬಾರದು. ತಪ್ಪು ಮಾಡಿದವರ ವಿರುದ್ಧ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಅತ್ತೂರು ಚರ್ಚ್‌ನ ಧರ್ಮಗುರು ರೆ.ಫಾ.ಜಾರ್ಜ್ ಡಿಸೋಜ ಮಾತ ನಾಡಿ, ಉಡುಪಿ ಧರ್ಮಾಪ್ರಾಂತದ ಧರ್ಮಾಧ್ಯಕ್ಷರು ಈಗಾಗಲೇ ಆದೇಶ ನೀಡಿ, ಚರ್ಚ್‌ಗಳಲ್ಲಿ ಯಾವುದೇ ಆಚರಣೆಗಳನ್ನು ಮಾಡಬಾರದು ಮತ್ತು ಸಮುದಾಯದ ಯಾರೇ ವ್ಯಕ್ತಿಗಳು ಮನೆಯಿಂದ ಹೊರಗೆ ಬರ ಬಾರದು ಎಂಬುದಾಗಿ ಸೂಚಿಸಿದ್ದಾರೆ ಎಂದು ತಿಳಿಸಿದರು.

ಕುಂದಾಪುರದ ಅಬು ಮುಹಮ್ಮದ್ ಮಾತನಾಡಿ, ಸರಕಾರದ ಆದೇಶ ಪಾಲಿ ಸುವುದಕ್ಕೆ ನಮಗೆ ಯಾವುದೇ ಸಮಸ್ಯೆ ಇಲ್ಲ. ಈಗಾಗಲೇ ನಮ್ಮ ಧಾರ್ಮಿಕ ಮುಖಂಡರು ಮಸೀದಿಯಲ್ಲಿ ಸಾಮೂಹಿಕ ನಮಾಝ್ ಮಾಡಬಾರದು ಎಂದು ಆದೇಶ ಹೊರಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಮಸೀದಿಯಲ್ಲಿ ನಮಾಝ್ ಮಾಡುವುದು ಧಾರ್ಮಿಕವಾಗಿಯೂ ನಿಷಿದ್ಧವಾಗಿರುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಡಿವೈಎಸ್ಪಿ ಟಿ.ಆರ್. ಜೈಶಂಕರ್, ಧಾರ್ಮಿಕ ಮುಖಂಡರಾದ ಅಶ್ಪಾಕ್ ಅಹ್ಮದ್, ಸಲಾವುದ್ದೀನ್ ಅಬ್ದುಲ್ಲಾ, ಮುಹ್ಮಮದ್ ಶೀಶ್, ಜಮಾಲುದ್ದೀನ್, ಅಮೀರ್ ಹಂಝಾ ಕಾಪು, ಜಿಪಂ ಸದಸ್ಯ ವಿಲ್ಸನ್ ರೋಡಿಗ್ರಸ್ ಮೊದಲಾದರು ಹಾಜರಿದ್ದರು.

ಸುಳ್ಳು ಸುದ್ದಿಗಳನ್ನು ಫೇಸ್‌ಬುಕ್, ವಾಟ್ಸಾಪ್‌ಗಳಂತಹ ಸಾಮಾಜಿಕ ಜಾಲ ತಾಣಗಳಲ್ಲಿ ಹರಡುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಎಚ್ಚರಿಕೆ ನೀಡಿದ್ದಾರೆ.

ಸಭೆಯಲ್ಲಿ ಅಬು ಮುಹಮ್ಮದ್ ಮಾತನಾಡಿ, ಮುಸ್ಲಿಮ್ ಸಮುದಾಯದವರನ್ನು ಗುರಿಯಾಗಿರಿಸಿಕೊಂಡು ಕೆಲವರು ಇಂದು ತುಂಬಾ ತೊಂದರೆ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಮುದಾಯವನ್ನು ಅವಹೇಳನ ಮಾಡುವಂತಹ ಪೋಸ್ಟ್ ಹಾಕಿ ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಈಗಾಗಲೇ ನಮ್ಮ ಜಿಲ್ಲೆಯಲ್ಲಿ ಸೆನ್ ಅಪರಾಧ ಪೊಲೀಸ್ ಠಾಣೆ ಕಾರ್ಯಾಚರಿಸುತ್ತಿದ್ದು, ಈ ರೀತಿ ಸುಳ್ಳು ಸುದ್ದಿಯನ್ನು ಹರಡಿಸುವವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಜರಗಿಸ ಲಿದೆ. ಆದುದರಿಂದ ಈ ರೀತಿ ಸುಳ್ಳು ಸುದ್ದಿಗಳನ್ನು ಹರಡಿಸುವ ಕೆಲಸ ನಿಲ್ಲಿಸ ಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News