ಉಡುಪಿ ಜಿಲ್ಲೆಯಾದ್ಯಂತ ಗುಡುಗು-ಸಿಡಿಲು ಸಹಿತ ಭಾರೀ ಮಳೆ

Update: 2020-04-07 16:23 GMT

ಉಡುಪಿ, ಎ.7: ನೋವೆಲ್ ಕೊರೋನ ವೈರಸ್ ತಂದಿಟ್ಟಿರುವ ಲಾಕ್‌ಡೌನ್ ಹಾಗೂ ಅದಕ್ಕೆ ಸಂಬಂಧಿಸಿದ ಸಂಕಷ್ಟಗಳ ನಡುವೆ ಜಿಲ್ಲೆಯಲ್ಲಿ ಏರುತ್ತಿರುವ ಬೇಸಿಗೆಯ ತಾಪಮಾನ ಹಾಗೂ ಸಹಿಸಲಸಾಧ್ಯ ಸೆಕೆಗೆ ತಾತ್ಕಾಲಿಕ ಪರಿಹಾರವಾಗಿ ಇಂದು ಜಿಲ್ಲೆಯಾದ್ಯಂತ ಭಾರೀ ಮಳೆ, ಗುಡುಗು-ಸಿಡಿಲು ಸಹಿತ ಸುರಿದು ತಂಪಿನ ಸಿಂಚನವೆರಚಿತು.

ಉಡುಪಿ ಆಸುಪಾಸು ಸೇರಿದಂತೆ ಹಲವೆಡೆ ಇಂದು ಮುಂಜಾನೆ ಸಾಧಾರಣ ಮಳೆ ಸುರಿದಿದ್ದರೆ, ಅಪರಾಹ್ನ 2:30ರ ಬಳಿಕ ಭಾರೀ ಮಳೆ ಜಿಲ್ಲೆಯಾದ್ಯಂತ ಸುರಿಯತೊಡಗಿತು. ಹೆಬ್ರಿ, ಕಾರ್ಕಳ ಆಸುಪಾಸಿನಲ್ಲಿ ಅಪರಾಹ್ನದ ವೇಳೆ ಮಳೆ ಸುರಿದರೆ, ಉಡುಪಿ, ಬ್ರಹ್ಮಾವರ, ಸಾಸ್ತಾನ, ಕೋಟ, ಕುಂದಾಪುರ, ಬೈಂದೂರು, ಸಿದ್ಧಾಪುರ, ಶಂಕರನಾರಾಯಣ, ಕಾಪು, ಪಡುಬಿದ್ರಿ ಸೇರಿದಂತೆ ಜಿಲ್ಲೆಯಾದ್ಯಂತ ಸಂಜೆಯ ವೇಳೆಗೆ ಧಾರಾಕಾರ ಮಳೆಯು ಸಿಡಿಲು ಸಹಿತ ಸುರಿಯಿತು.

ಹೆಬ್ರಿ ತಾಲೂಕಿನ ವಿವಿದೆಡೆ ಮತ್ತು ಅಜೆಕಾರು,ಕಡ್ತಲ,ಎಳ್ಳಾರೆ ಪರಿಸರದಲ್ಲಿ ಅಪರಾಹ್ನ 2:20ರಿಂದ ಅರ್ಧಗಂಟೆ ಹೊತ್ತು ಸಿಡಿಲು ಸಹಿತ ತುಂತುರು ಮಳೆಯಾಗಿದೆ. ಶಿವಪುರ, ಹೆಬ್ರಿ ಮುದ್ರಾಡಿ, ವರಂಗ ಮುನಿಯಾಲು ಪರಿಸರದಲ್ಲಿ ಸಹ ಒಳ್ಳೆ ಮಳೆಯಾದ ವರದಿ ಬಂದಿದೆ. ಉಡುಪಿಯಲ್ಲಿ ಮಳೆಗಿಂತಲೂ ಸಿಡಿಲಿಗೆ ಜನ ಬೆದರುವಂತಾಯಿತು.

ಇದರಿಂದ ಕಳೆದ ಸುಮಾರು ಒಂದು ತಿಂಗಳ ಸೆಕೆಯಿಂದ ಬಸವಳಿದಿದ್ದ ಜಿಲ್ಲೆಯ ಜನತೆ ತಾತ್ಕಾಲಿಕವಾದರೂ ಸಮಾಧಾನದ ನಿಟ್ಟುಸಿರು ಬಿಡುವಂತಾ ಯಿತು. ಸಿಡಿಲು-ಗುಡುಗು ಪ್ರಾರಂಭಗೊಳ್ಳುತಿದ್ದಂತೆ ಹಲವು ಕಡೆಗಳಲ್ಲಿ ನಿರೀಕ್ಷೆಯಂತೆ ವಿದ್ಯುತ್ ಕೈಕೊಟ್ಟಿತು. ಮಳೆ ನಿಂತರೂ ವಿದ್ಯುತ್ ಬಾರದೇ ಉರಿಯಂಥ ಸೆಕೆ ಪ್ರಾರಂಭಗೊಂಡಾಗ ಜನ ಮಳೆಗೆ ಶಪಿಸುವಂತಾಯಿತು.

ಕಳೆದ ವರ್ಷ ಮುಂಗಾರು ಪೂರ್ವ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕುಡಿಯುವ ನೀರು ಸೇರಿದಂತೆ ಹಲವು ವಿಧದಲ್ಲಿ ತೊಂದರೆ ಅನುಭವಿಸಿದ್ದ ಜಿಲ್ಲೆಯ ಜನತೆ, ಅದಕ್ಕಿಂತಲೂ ವಿಶೇಷವಾಗಿ ಜಿಲ್ಲೆಯ ಕೃಷಿಕರು ಈ ಬಾರಿ ಎಪ್ರಿಲ್ ತಿಂಗಳ ಮೊದಲ ವಾರದಲ್ಲೇ ಮಳೆ ಸುರಿದಿರುವುದರಿಂದ ಮಳೆಗಾಲವನ್ನು ಹೆಚ್ಚಿನ ನಿರೀಕ್ಷೆಗಳೊಂದಿಗೆ ಎದುರು ನೋಡುವಂತಾಗಿದೆ.

ಆದರೆ ಕಳೆದ ಎರಡು ವಾರಗಳಿಂದ ಇರುವ ಲಾಕ್‌ಡೌನ್‌ನೊಂದಿಗೆ ಇಂದು ಸುರಿದಿರುವ ಮಳೆಗೆ ಕೊರೋನ ವೈರಸ್ ಯಾವ ರೀತಿಯ ವರ್ತನೆ ತೋರಲಿದೆ ಎಂಬ ಕುತೂಹಲ ಎಲ್ಲರಿಗಿದೆ. ಕೆಲವೊಂದು ವೈರಸ್‌ಗಳು ಮಳೆಯಿಂದ ನಿಯಂತ್ರಣಕ್ಕೆ ಬರುವ ಕಾರಣ, ವಿಶ್ವದಾದ್ಯಂತ ತನ್ನ ಉಗ್ರ ರೂಪವನ್ನು ತೋರುತ್ತಿರುವ ಹೊಸ ವೈರಸ್ ಕೋವಿಡ್-19 ಸೋಂಕು ಮಳೆಯಿಂದ ಕಡಿಮೆಗೊಳ್ಳುವುದೇ ಅಥವಾ ತನ್ನ ಕಬಂಧ ಬಾಹುಗಳನ್ನು ಇನ್ನಷ್ಟು ವಿಸ್ತರಿಸುವುದೇ ಎಂಬುದನ್ನು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News